ಉಳ್ಳಾಲ, ಮಾ. 21 (DaijiworldNews/SM): ಒಗ್ಗಟ್ಟನ್ನು ಮುರಿಯುವ ಉದ್ದೇಶದಿಂದ ಧಾರ್ಮಿಕ ನಂಬಿಕೆಗಳಿಗೆ ಘಾಸಿಗೊಳಿಸುವ ಕಾರ್ಯಗಳಾಗುತ್ತಿದೆ. ನಾವು ನಾವಾಗಿಯೇ ಉಳಿಯಲು ಸಂಸ್ಕೃತದ ಮೇಲಿರುವ ಗೌರವ ನಂಬಿಕೆಗಳೇ ಕಾರಣ. ಇದನ್ನು ಹಾಳುಗೆಡವಲು ದುಷ್ಟ ಶಕ್ತಿಗಳು ಯತ್ನಿಸುತ್ತಿವೆ. ಇದನ್ನು ಎಲ್ಲರೂ ಒಂದಾಗಿ ನಿಂತು ತಡೆಗಟ್ಟಬೇಕು. ಆಕ್ರಮಣ ಬಂದಾಗ ಮಾತ್ರವಲ್ಲ ಇಲ್ಲದಿದ್ದರೂ ಹಿಂದೂ ಸಮಾಜ ಒಗ್ಗಟ್ಟಾಗಿರಬೇಕಿದೆ ಎಂದು ಅಯೋಧ್ಯೆ ಶ್ರೀ ರಾಮಜನ್ಮಭೂಮಿ ಸೇವಾ ಟ್ರಸ್ಟಿನ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಅವರು ವಿಶ್ವ ಹಿಂದೂ ಪರಿಷತ್- ಬಜರಂಗದಳ ವತಿಯಿಂದ ಹಿಂದೂ ಶ್ರಧ್ಧಾ ಕೇಂದ್ರಗಳಲ್ಲಿ ದುಷ್ಕೃತ್ಯ ಎಸಗುತ್ತಿರುವ ದುಷ್ಕರ್ಮಿಗಳ ಕೃತ್ಯಗಳ ವಿರುದ್ಧ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಿಂದ ಕುತ್ತಾರು ಶ್ರೀ ಕೊರಗಜ್ಜ ಆದಿಕ್ಷೇತ್ರಕ್ಕೆ ಭಾನುವಾರ ಹಮ್ಮಿಕೊಂಡಿದ್ದ ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಸಂಸ್ಕೃತಿ ಪ್ರತೀಕವಾಗಿರುವ ಅಯೋಧ್ಯೆ ರಾಮಮಂದಿರ ನಿರಂತರ ಹೋರಾಟದ ಬಳಿಕ ಫಲಪ್ರದವಾಗಿದೆ. ಹಿಂದೂ ಸಂತತಿ ಇರುವಷ್ಟು ಕಾಲ ಮಂದಿರ ಮಂದಿರವಾಗಿಯೇ ಉಳಿಯಲಿದೆ. ದೇಶದಲ್ಲಿ ಮಹಿಳೆಯರು ನರಕ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಸರಕಾರವೇ ಹೆಣ್ಮಕ್ಕಳ ನಾಪತ್ತೆ ಕುರಿತು ವರದಿ ನೀಡುತ್ತಲೇ ಇದೆ. ರಾಮನ ಆದರ್ಶಗಳನ್ನು ಮಕ್ಕಳಿಗೆ ತಿಳಿಸುವ ಕಾರ್ಯವಾಗಲಿ. ಹೆತ್ತವರಿಗೆ , ಸಂಸ್ಕೃತಿಗೆ ಗೌರವ ಕೊಡುವುದನ್ನು ಕಲಿಸಲಿ ಎಂದರು.
ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಪ್ರೊ. ಎಂ.ಬಿ ಪುರಾಣಿಕ್ ಮಾತನಾಡಿ, ಹಿಂದೂ ಶ್ರದ್ಧಾ ಕೇಂದ್ರಗಳಿಗೆ ಘಾಸಿಗೊಳಿಸುತ್ತಿರುವುದು ಸಮಾಜದ ಪಿಡುಗಾಗಿದೆ. ಮೊಗಲರು, ಕ್ರೈಸ್ತರಿಂದ ಅನ್ಯಾಯಕ್ಕೊಳಗಾದ ಹಿಂದೂ ಧರ್ಮ ಎಂದಿಗೂ ಸೋತಿಲ್ಲ. ದೈವ-ದೇವರ ವಿಚಾರಗಳ ಮೇಲೆ ಕೀಳರಿಮೆ ಹುಟ್ಟುವಂತೆ ಮಾಡುತ್ತಿರುವ ಕಿರಾತಕರು ಹಿಂದೂಗಳ ದೌರ್ಬಲ್ಯ ಉಪಯೋಗಿಸಿ ಮತಾಂತರ ಷಡ್ಯಂತ್ರ ರೂಪಿಸಲಾಗುತ್ತಿದೆ. ಹಿಂದೂ ಸಮಾಜ ಎಲ್ಲರನ್ನು ಸ್ವಾಗತಿಸಿದ ಸನಾತನ ಧರ್ಮ. ಸಹನೆ, ತಾಳ್ಮೆಯ ಇನ್ನೊಂದು ಮುಖವೇ ಹಿಂದೂ ಸಮಾಜ. ಆದರೆ ತಾಳ್ಮೆಗೂ ಮಿತಿ ಇದೆ. ಅಯೋಧ್ಯೆ ಕರಸೇವಕರಿದ್ದ ರೈಲಿಗೆ ಬೆಂಕಿ ಕೊಟ್ಟವರನ್ನು ಬಿಡದ ಸಮಾಜದ ತಾಳ್ಮೆಗೂ ಮಿತಿ ಇದೆ. ಮಿತಿ ಮೀರಿದಲ್ಲಿ ನಿಲ್ಲಿಸುವ ತಾಕತ್ತೂ ಇದೆ ಎಂದರು.