ಹುಬ್ಬಳ್ಳಿ, ಆ31(SS): ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಕುಟುಕಿದ್ದು, ಅವರೊಬ್ಬ ಪ್ರಧಾನ ಮಂತ್ರಿಯಲ್ಲ, ಅವರು ಪ್ರಚಾರ ಮಂತ್ರಿ ಎಂದು ಕಿಡಿಕಾರಿದ್ದಾರೆ. ಮಾತ್ರವಲ್ಲ ಮೋದಿಯವರು ತಿನ್ನಲು ಬಿಡುವುದಿಲ್ಲ, ನಾನೂ ತಿನ್ನುವುದಿಲ್ಲ ಎಂದು ಹೇಳಿಕೊಂಡೇ ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪ್ರಚಾರಕ್ಕಾಗಿ ದೇಶದ ಜನರ ತೆರಿಗೆ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ರಕ್ಷಣಾ ಇಲಾಖೆಗೆ ವಿಮಾನ ಖರೀದಿ ಮಾಡಿದ್ದು, ಅದರಲ್ಲಿ 1,30,000 ಕೋಟಿ ರೂ. ಹಗರಣ ನಡೆದಿದೆ. ಇದು ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹಿಡಿದ ಮೇಲೆ ನಡೆದ ದೊಡ್ಡ ಹಗರಣವಾಗಿದ್ದು, ಇದು ನಮ್ಮ ರಕ್ಷಣಾ ಇಲಾಖೆಯಲ್ಲಿ ನಡಿದಿರೋದು ಒಂದು ದೊಡ್ಡ ದುರಂತ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿಯವರು ಭ್ರಷ್ಟಾಚಾರ ಮುಕ್ತ ಭಾರತ ಮಾಡುತ್ತೇವೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದರು. ಆದರೆ, ಕೇಂದ್ರ ಸರ್ಕಾರ ಹಾಗೂ ಕೇಂದ್ರದ ಮಂತ್ರಿಗಳೇ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಇವರಿಂದ ಭ್ರಷ್ಟಾಚಾರ ಮುಕ್ತ ಭಾರತ ನಿರೀಕ್ಷಿಸಲು ಸಾಧ್ಯವಿಲ್ಲ. ಮೋದಿಯವರು ತಿನ್ನಲು ಬಿಡುವುದಿಲ್ಲ, ನಾನೂ ತಿನ್ನುವುದಿಲ್ಲ ಎಂದು ಹೇಳಿಕೊಂಡೇ ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಆರೋಪಿದರು.