ಮಂಗಳೂರು, ಆ31(SS): ನಟೋರಿಯಸ್ ಕೈದಿಯೊಬ್ಬನನ್ನು ಪೊಲೀಸರು ಜೈಲಿನಿಂದ ಸಾಗಿಸುತ್ತಿದ್ದ ವೇಳೆ ರಸ್ತೆ ಮಧ್ಯೆ ವಾಹನ ನಿಲ್ಲಿಸಿದ್ದು ಮಾತ್ರವಲ್ಲದೆ ಕುಟುಂಬಸ್ಥರಿಗೆ ಭೇಟಿ ಮಾಡಿಸಿ ಕಾನೂನು ಉಲ್ಲಂಘಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಫರಂಗಿಪೇಟೆಯ ಡಬಲ್ ಮರ್ಡರ್ ಪ್ರಕರಣದ ಪ್ರಮುಖ ಆರೋಪಿ ಡೀಲ್ ನೌಫಾಲ್ ಎಂಬ ಕೈದಿಯನ್ನು ಪೊಲೀಸರು ಕುಟುಂಬಸ್ಥರಿಗೆ ಭೇಟಿ ಮಾಡಿಸಿದ್ದಾರೆ. ಮಂಗಳೂರಿನ ಕದ್ರಿ ಪೊಲೀಸ್ ಠಾಣೆ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು, ಕೈದಿಯನ್ನು ಪ್ರಕರಣವೊಂದಕ್ಕೆ ಸಂಬಂಧಿಸಿ ತುಮಕೂರು ಪೊಲೀಸರು ಮಂಗಳೂರು ಜೈಲಿನಿಂದ ಕರೆದುಕೊಂಡು ಹೋಗುತ್ತಿದ್ದರು.
ಈ ವೇಳೆ ಪೊಲೀಸರು ವಾಹನ ನಿಲ್ಲಿಸಿ ನೌಫಾಲ್ ಪತ್ನಿ, ಮಗು ಸೇರಿ ಕುಟುಂಬಸ್ಥರಿಗೆ ಕೈದಿಯನ್ನು ಭೇಟಿ ಮಾಡಿಸಿದ್ದಾರೆ.
ಪೊಲೀಸರು ರಸ್ತೆ ಮಧ್ಯೆ ವಾಹನ ನಿಲ್ಲಿಸಿ, ಕುಟುಂಬಸ್ಥರಿಗೆ ಕೈದಿಯನ್ನು ಭೇಟಿ ಮಾಡಿಸಿ ಕಾನೂನು ಉಲ್ಲಂಘಿಸಿರುವ ಈ ಘಟನೆಗೆ ಆಕ್ರೋಶ ವ್ಯಕ್ತವಾಗಿದೆ. ಮಾತ್ರವಲ್ಲ, ಮೇಲಾಧಿಕಾರಿಗಳ ಅನುಮತಿ ಇಲ್ಲದೆ ಪೊಲೀಸರು ಕೈದಿಯ ಜೊತೆ ಹೊಂದಾಣಿಕೆ ಮಾಡಿಕೊಂಡು ಕುಟುಂಬಸ್ಥರನ್ನು ಭೇಟಿ ಮಾಡಿಸಿದ್ದು ಕರ್ತವ್ಯ ಲೋಪಕ್ಕೆ ನಿದರ್ಶನ ಎಂದು ಅರೋಪಿಸಲಾಗಿದೆ.