ಕಾಸರಗೋಡು, ಆ 31(SM): ಪ್ರಿಯಕರನ ಜೊತೆ ಪರಾರಿಯಾಗಲು ವಿವಾಹಿತೆ ಮಹಿಳೆಯೋರ್ವಳು ಅಪಹರಣ ನಾಟಕವಾಡಿದ ಘಟನೆ ಶುಕ್ರವಾರ ಚೆರ್ವತ್ತೊರಿನಲ್ಲಿ ನಡೆದಿದೆ. ಅಪಹರಣದ ಪ್ರಹಸನ ಪೊಲೀಸರು ಮತ್ತು ನಾಗರಿಕರನ್ನು ಗಂಟೆಗಳ ಕಾಲ ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಕೊನೆಗೂ ಮಹಿಳೆ ಪ್ರಿಯಕರನ ಜೊತೆ ಪತ್ತೆಯಾಗುವುದರೊಂದಿಗೆ ನಿಟ್ಟುಸಿರು ಬಿಡುವಂತಾಯಿತು.
ಚಿತ್ತಾರಿಕ್ಕಾಲ್ ವೆಳ್ಳಡ್ಕದ ಮನು ಯಾನೆ ಮನೋಜ್ ಎಂಬವರ ಪತ್ನಿ ಮಿನು(23) ಅಪಹರಣ ನಾಟಕದ ಸೂತ್ರಧಾರೆ. ಬೆಳಿಗ್ಗೆ ಮೂರು ವರ್ಷದ ಪುತ್ರ ಸಾಯಿ ಕೃಷ್ಣ ಜೊತೆ ಪ್ರಿಯಕರನ ಜೊತೆ ಪರಾರಿಯಾಗಿದ್ದಳು. ಕೊನೆಗೆ ಪ್ರಿಯಕರನ ಜೊತೆ ಕೋಜಿಕ್ಕೋಡ್ ರೈಲ್ವೆ ನಿಲ್ದಾಣ ಪರಿಸರದಿಂದ ಪೊಲೀಸರು ಆಕೆಯನ್ನು ವಶಕ್ಕೆ ತೆಗೆದುಕೊಂಡರು.
ಶುಕ್ರವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ನಾಟಕ ಪ್ರಕರಣ ನಡೆದಿತ್ತು. ಪತಿ ಮಾಲೋತ್ ಎಂಬಲ್ಲಿ ಮೆಕಾನಿಕ್ ಕೆಲಸ ನಿರ್ವಹಿಸುತ್ತಿದ್ದು, ಪತಿಯ ಮೊಬೈಲ್ ಗೆ ಕರೆ ಮಾಡಿದ್ದ ಈಕೆ ತನ್ನನ್ನು ಅಪಹರಿಸಲು ಯತ್ನಿಸಿರುವುದಾಗಿ ಹೇಳಿ ಮೊಬೈಲ್ ಕರೆ ಕಟ್ ಮಾಡಿದಳು .
ಮನೆಯಿಂದ ಬೊಬ್ಬೆ ಕೇಳಿ ಬಂದಿತ್ತು. ಸ್ಥಳೀಯರು ಧಾವಿಸಿ ಬರುವಷ್ಟರಲ್ಲಿ ಕಾರು ಸಹಿತ ಅಲ್ಲಿಂದ ಪರಾರಿಯಾಗಿದ್ದರು. ಮನೆಯೊಳಗೆ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದವು. ಪೊಲೀಸರಿಗೆ ಲಭಿಸಿದ ಮಾಹಿತಿಯಂತೆ ತನಿಖೆಯನ್ನು ಚುರುಕುಗೊಳಿಸಲಾಗಿತ್ತು. ಘಟನೆ ಸುದ್ದಿ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎ . ಶ್ರೀನಿವಾಸ್, ಕಾಞ೦ಗಾಡ್ ಡಿ ವೈ ಎಸ್ ಪಿ ಪಿ. ಕೆ ಸುಧಾಕರನ್, ಚಿತ್ತಾರಿಕ್ಕಾಲ್ ಠಾಣಾ ಸಬ್ ಇನ್ಸ್ ಪೆಕ್ಟರ್ ರಂಜಿತ್ ರವೀಂದ್ರನ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಂದು ತನಿಖೆ ನಡೆಸಿದ್ದರು.
ತನಿಖೆಯನ್ನು ಹೊರ ಜಿಲ್ಲೆಗೂ ವಿಸ್ತರಿಸಲಾಗಿತ್ತು. ಈ ನಡುವೆ ಕೋಜಿಕ್ಕೋಡ್ ರೈಲ್ವೆ ನಿಲ್ದಾಣ ಪರಿಸರದಿಂದ ಪ್ರಿಯಕರನ ಜೊತೆ ಈಕೆಯನ್ನು ಪತ್ತೆ ಹಚ್ಚಿದ್ದು , ಕೋಜಿಕ್ಕೋಡ್ ಠಾಣಾ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಕಾರನ್ನು ಪಯ್ಯನ್ನೂರು ರೈಲ್ವೆ ನಿಲ್ದಾಣ ಪರಿಸರದಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ . ಅಪಹರಣ ನಾಟಕದಲ್ಲಿ ಭಾಗಿಯಾದ ಪ್ರಿಯಕರ ಬಿನು ಎಂಬಾತನನ್ನು ಕೂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.