ಮಂಗಳೂರು, ಸೆ01(SS): ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಪರಶುರಾಮ್ ವಾಗ್ಮೋರೆ ಶ್ರೀರಾಮ ಸೇನೆ ಕಾರ್ಯಕರ್ತ ಅಲ್ಲ ಎಂದು ಸಂಘಟನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಗೌರಿ ಹತ್ಯೆ ಪ್ರಕರಣದಲ್ಲಿ ಪರಶುರಾಮ್ ವಾಗ್ಮೋರೆ ಭಾಗಿಯಾಗಿದ್ದಾನೆಂಬುದನ್ನು ನಾನು ಒಪ್ಪಲಾರೆ. ಆದರೆ, ವಾಗ್ಮೋರೆ ಆರ್'ಎಸ್ಎಸ್ ಸದಸ್ಯ ಎಂದು ಹೇಳಿದ್ದಾರೆ.
ಮಾನವೀಯತೆಯ ಆಧಾರದ ಮೇರೆಗೆ ವಾಗ್ಮೋರೆ ಕುಟುಂಬಸ್ಥರನ್ನು ಸಂಘಟನೆ ಭೇಟಿ ಮಾಡಿತ್ತು. ಹಲವು ಆರೋಪಗಳ ಮೇರೆಗೆ ಇತ್ತೀಚಿನ ದಿನಗಳಲ್ಲಿ ಹಿಂದು ಕಾರ್ಯಕರ್ತರನ್ನು ಗುರಿ ಮಾಡಲಾಗುತ್ತಿದೆ. ಗೌರಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವವರ ಕುರಿತು ಸೂಕ್ತ ರೀತಿಯ ಸಾಕ್ಷ್ಯಾಧಾರಗಳು ಪೊಲೀಸರ ಬಳಿಯಿಲ್ಲ. ಈ ವಿಚಾರದಲ್ಲಿ ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದಿದ್ದಾರೆ.
ಸಿಂಧಗಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ ಪ್ರಕರಣದಲ್ಲಿ ಇದ್ದದ್ದು ಆರ್ಎಸ್ಎಸ್ ಕಾರ್ಯಕರ್ತರು. ಪರಶುರಾಮ್ ವಾಗ್ಮೋರೆ ಸಹ ಅದೇ ಪ್ರಕರಣದಲ್ಲಿ ಇದ್ದ. ಹಾಗಾಗಿ ಆತ ಆರ್ಎಸ್ಎಸ್ ಕಾರ್ಯಕರ್ತ ಇರಬಹುದು ಎಂದು ಅವರು ಹೇಳಿದ್ದಾರೆ.
ಒಂದು ಚಿತ್ರ ಇಟ್ಟುಕೊಂಡು ಶ್ರೀರಾಮಸೇನೆಗೆ ಕೆಟ್ಟ ಹೆಸರು ಬಳಿಯುವ ಯತ್ನ ಮಾಡಲಾಗುತ್ತಿದೆ. ಸನಾತನ ಸಂಸ್ಥೆಯನ್ನು ನಿಷೇಧ ಮಾಡಬೇಕು ಎಂದು ಹೋರಾಟ ನಡೆಯುತ್ತಿದೆ. ವಿಚಾರವಾದಿಗಳು, ಯೋಧರ, ವಿಜ್ಞಾನಿಗಳ ಹತ್ಯೆ ಬಗ್ಗೆ ಮಾತನಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ವಾಗ್ಮೋರೆ ಜೊತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋಗಳು ಮದುವೆ ಅಥವಾ ಯಾವುದೋ ಕಾರ್ಯಕ್ರಮದಲ್ಲಿ ತೆಗೆದಿರುವ ಫೋಟೋಗಳು ಎಂದು ಸ್ಪಷ್ಟಪಡಿಸಿದ್ದಾರೆ.