ಮುಂಬಯಿ, ಸೆ01(SS): ಮಾವೋವಾದಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸುತ್ತಿರುವ ವಿಷಯ ದೇಶಾದ್ಯಂತ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಡಪಂಥೀಯ ಕಾರ್ಯಕರ್ತರನ್ನು ಬಂಧಿಸಿದ್ದು, ಇವರು ನಕ್ಸಲ್ ಜೊತೆ ಬಲವಾದ ನಂಟು ಹೊಂದಿರುವ ಬಗ್ಗೆ ಸಾಕ್ಷಿ ಲಭ್ಯವಾಗಿದೆ.
ಮಾವೋವಾದಿಗಳು ದೇಶದಲ್ಲಿ ಮೋದಿ ಆಡಳಿತವನ್ನು ಅಂತ್ಯಗೊಳಿಸುವುದಕ್ಕೆ ರಾಜೀವ್ ಹತ್ಯೆ ಮಾದರಿಯ ಗಂಭೀರ ಸ್ಕೆಚ್ಗೆ ಸಂಚು ರೂಪಿಸಿದ್ದರು ಎಂಬುವುದನ್ನು ಮಹಾರಾಷ್ಟ್ರ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಮಾತ್ರವಲ್ಲ, ಐವರು ಮಾನವ ಹಕ್ಕು ಹೋರಾಟಗಾರರ ಬಂಧನಕ್ಕಾಗಿ ನಡೆದ ದಾಳಿ ವೇಳೆ ಸಿಕ್ಕಿದ ಪುರಾವೆಗಳು ಇದನ್ನು ಸಾಬೀತುಪಡಿಸಿವೆ ಎಂದಿದ್ದಾರೆ.
ಮಹಾರಾಷ್ಟ್ರ ಪೊಲೀಸರು ಎಡಪಂಥೀಯ ಹೋರಾಟಗಾರರಾದ ಪಿ. ವರವರ ರಾವ್, ಅರುಣ್ ಫೆರೇರಾ, ಸುಧಾ ಭಾರದ್ವಾಜ್, ಗೌತಮ್ ನವಲಖಾ ಮತ್ತು ವೆರ್ನನ್ ಗೋನ್ವಾಲ್ವಿಸ್ ಅವರನ್ನು ಬಂಧಿಸಿದ್ದರು.
ಸುದ್ದಿಗೋಷ್ಠಿ ನಡೆಸಿದ ಎಡಿಜಿಪಿ ಪರಮ್ವೀರ್ ಸಿಂಗ್, ಬಂಧಿತ ಹೋರಾಟಗಾರರು ಮತ್ತು ಮಾವೋವಾದಿಗಳ ನಡುವಿನ ಸಂವಹನದ ಕೆಲವು ದಾಖಲೆ ಬಿಡುಗಡೆಗೊಳಿಸಿದರು. ವರವರ ರಾವ್, ಸುಧಾ ಭಾರಧ್ವಾಜ್ ಸೇರಿದಂತೆ ಬಂಧಿತರು ನಿಷೇಧಿತ ನಕ್ಸಲ್ ಗುಂಪುಗಳ ಜತೆ ಸಂಬಂಧ ಹೊಂದಿರುವುದಕ್ಕೆ ದಾಖಲೆಗಳಿವೆ ಎಂದರು.
ಭೀಮಾ-ಕೋರೆಗಾಂವ್ ಹಿಂಸಾಚಾರ ಸಂಬಂಧ ಜೂನ್ ತಿಂಗಳಿನಲ್ಲಿ ಬಂಧಿತರಾದ ಮಾನವ ಹಕ್ಕು ಹೋರಾಟ ರೋನಾ ಜಾಕೊಬ್ ವಿಲ್ಸನ್ ಅವರು ಸಿಪಿಎಂ-ಮಾವೋ ನಾಯಕ 'ಕಾಮ್ರೇಡ್ ಪ್ರಕಾಶ್'ಗೆ ಬರೆದ ಪತ್ರದಲ್ಲಿ ರಾಜೀವ್ ಹತ್ಯೆ ಮಾದರಿಯಲ್ಲಿ ಮೋದಿ ರಾಜ್ ಅಂತ್ಯದ ಬಗ್ಗೆ ಮಾತನಾಡಲಾಗಿದೆ. ಇದರಲ್ಲಿ ಇತ್ತೀಚೆಗೆ ಬಂಧಿತರಾದ ಅರುಣ್ ಫೆರೇರಾ ಮತ್ತು ವೆರ್ನನ್ ಗೋನ್ವಾಲ್ವಿಸ್ ಅವರ ಉಲ್ಲೇಖವೂ ಇದೆ ಎಂದು ಪೊಲೀಸರು ವಿವರಿಸಿದ್ದಾರೆ.