ಚಿಕ್ಕಮಗಳೂರು, ಸೆ01(SS): ಮಂಗಳೂರು ನೋಂದಣಿಯ ಕಾರು ಚಾಲಕನೊಬ್ಬ ಅಂಬುಲೆನ್ಸ್ಗೆ ಹೋಗಲು ಅವಕಾಶ ಕಲ್ಪಿಸಿಕೊಡದೇ ಸತಾಯಿಸಿರುವ ಘಟನೆಯೊಂದು ಬಿ.ಸಿ.ರೋಡ್ನಲ್ಲಿ ವರದಿಯಾಗಿದೆ.
ಚಿಕ್ಕಮಗಳೂರಿನಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ 45 ವರ್ಷದ ಅಮಿರ್ಜಾನ್ ಎಂಬುವರನ್ನು ಅಂಬುಲೆನ್ಸ್ನಲ್ಲಿ ಕರೆದುಕೊಂಡು ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅಂಬುಲೆನ್ಸ್ ಚಾಲಕ ಸೈರನ್ ಹಾಕಿಕೊಂಡು, ಹಾರ್ನ್ ಮಾಡಿದರೂ ಕೆಎ 19 ಮಂಗಳೂರು ನೋಂದಣಿಯ ಕಾರು ಚಾಲಕ ದಾರಿ ಬಿಟ್ಟಿರಲಿಲ್ಲ. ಪರಿಣಾಮ ಅನಾರೋಗ್ಯದಿಂದ ಬಳಲುತ್ತಿದ್ದ ರೋಗಿಯನ್ನು ಬಹುಬೇಗ ಆಸ್ಪತ್ರೆಗೆ ದಾಖಲಿಸಲು ಚಾಲಕ ತೀವ್ರ ಹರಸಾಹಸ ಪಟ್ಟಿದ್ದಾನೆ.
ಈ ಘಟನೆ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಾಲಕ ಅಮಾನವೀಯತೆ ಮೆರೆದ ಘಟನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಮಾತ್ರವಲ್ಲ, ಕಾರು ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಲು ಆಗ್ರಹ ಕೂಡ ಕೇಳಿಬಂದಿದೆ.