ಸುಪ್ರೀತಾ ಸಾಲ್ಯಾನ್, ಪಡು
ದುನಿಯಾ ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ಕಿಚ್ಚು ಹೊತ್ತಿಸಿ ಚಂದನವನಕ್ಕೆ ಕಾಲಿಟ್ಟ ಈ ಬೆಡಗಿಯ ಹೆಸರು ರಶ್ಮಿ. ಮೂಲತಃ ಪುತ್ತೂರಿನಲ್ಲಿ ಹುಟ್ಟಿ ಬೆಳೆದ ಈ ಪ್ರತಿಭೆ ದುನಿಯಾ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ದುನಿಯಾ ಚಿತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿ ಸದ್ದಿಲ್ಲದೆ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡದ್ದು ಮಾತ್ರವಲ್ಲದೆ, ನಟನೆಗೆ ಅನೇಕ ಪ್ರಶಸ್ತಿಗಳನ್ನು ರಶ್ಮಿಯವರು ಮುಡಿಗೇರಿಸಿಕೊಂಡಿದ್ದರು. ಮಾತ್ರವಲ್ಲ ಕನ್ನಡ ಚಿತ್ರರಂಗದಲ್ಲಿ ಓರ್ವ ಅಪೂರ್ವ ಕಲಾವಿದೆಯಾಗಿ ಮೆರೆದಿದ್ದರು.
ಇದೀಗ ರಶ್ಮಿ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಹೆಸರು ಕಾರ್ನಿ. ಬರಹಗಾರ್ತಿಯಾಗಿ ಈ ಚಿತ್ರಕ್ಕೆ ರಶ್ಮಿಯವರು ರೀ-ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ಲೈಫ್ ಸೂಪರ್ ಚಿತ್ರ ನಿರ್ದೇಶಿಸಿದ್ದ ವಿನೋದ್ ಕುಮಾರ್ ಕಾರ್ನಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಾರ್ನಿ ಚಿತ್ರದಲ್ಲಿ ರಶ್ಮಿ ಲೀಡ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸೈಕಲಾಜಿಕಲ್ ಥ್ರಿಲ್ಲರ್ ಹಾಗೂ ಮರ್ಡರ್ ಮಿಸ್ಟ್ರಿ ಕಥೆ ಹೊಂದಿರುವ ಕಾರ್ನಿ ಸಿನಿಮಾ ಪ್ರತಿ ಹಂತದಲ್ಲೂ ಪ್ರೇಕ್ಷಕರ ಕುತೂಹಲ ಹೆಚ್ಚಿಸುವ ಕಥಾಹಂದರವನ್ನು ಹೊಂದಿದೆ.
ಈ ಚಿತ್ರದ ಕುರಿತಾಗಿ ಮಾತಿಗಿಳಿದ ರಶ್ಮಿ, ಈ ಸಿನಿಮಾದ ಕಥೆ ಬಹಳ ಇಷ್ಟವಾಯಿತು. ನಾನು ಕಥೆ ಕೇಳಿ ಥ್ರಿಲ್ ಆದೆ. ಅದೇ ಕಾರಣಕ್ಕೆ ಈ ಚಿತ್ರವನ್ನು ಒಪ್ಪಿಕೊಂಡೆ. ನಾಲ್ಕು ಹುಡುಗಿಯರ ಸುತ್ತ ಸುತ್ತುವ ಕಥೆಯಿದು. ನಿಗೂಢವಾಗಿ ಕಾಣೆಯಾದ ನಾಲ್ವರು ಹುಡುಗಿಯರ ಶೋಧ ಕಾರ್ಯಕ್ಕೆ ನಾನು ಕೈ ಹಾಕಿರುತ್ತೇನೆ... ಆ ವೇಳೆ ಏನೆಲ್ಲ ಅವಘಡಗಳು ಸಂಭವಿಸುತ್ತವೆ..? ಕಾಣೆಯಾದವರು ಸಿಗುತ್ತಾರಾ..? ಹೀಗೆ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಶೈಲಿಯಲ್ಲಿಯೇ ಇಡೀ ಸಿನಿಮಾ ಸಾಗಲಿದೆ’ ಎಂದು ಹೇಳಿದ್ದಾರೆ.
ಜ್ಯೂನಿಯರ್ ಶೃತಿ ಎಂದೇ ಎಲ್ಲರ ಮನಗೆದ್ದಿರುವ ಈ ಪ್ರತಿಭೆ ಕನ್ನಡದ ಅಕ್ಕ-ತಂಗಿ, ಮಂದಾಕಿನಿ, ವೆಂಕಿ, ಆಟಕ್ಕುಂಟು ಲೆಕ್ಕಕ್ಕಿಲ್ಲ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಕರಾವಳಿಯ ಈ ಪ್ರತಿಭಾನ್ವಿತ ನಟಿ ತುಳು ಚಿತ್ರದಲ್ಲೂ ನಟಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸದ್ಯ ಸವಾಲಿನ ಪಾತ್ರವನ್ನು ನಿಭಾಯಿಸಿರುವ ಕಾರ್ನಿ ಚಿತ್ರ ಶೂಟಿಂಗ್ ಮುಗಿಸಿದ್ದು ಇನ್ನೇನು ಕೆಲವೇ ದಿನಗಳಲ್ಲಿ ತೆರೆಕಾಣಲಿದೆ.