ಮಂಗಳೂರು, ಸೆ01(SS): ಮಂಗಳೂರು ನೋಂದಣಿಯ ಕಾರು ಚಾಲಕನೊಬ್ಬ ಆ್ಯಂಬುಲೆನ್ಸ್ಗೆ ಹೋಗಲು ಅವಕಾಶ ಕಲ್ಪಿಸಿಕೊಡದೇ ಸತಾಯಿಸಿದ್ದ ಎನ್ನುವ ಘಟನೆಯೊಂದು ಬಂಟ್ವಾಳ ತಾಲ್ಲೂಕಿನ ವಗ್ಗದಿಂದ ವರದಿಯಾಗಿತ್ತು.
ಇದೀಗ ಈ ಘಟನೆಗೆ ಸ್ವತಃ ಕಾರು ಚಾಲಕರಾದ ಸುರತ್ಕಲ್ ನಿವಾಸಿ ದಿನೇಶ್ ಪ್ರಭು ಪ್ರತಿಕ್ರಿಯಿಸಿದ್ದಾರೆ. ದಾಯ್ಜಿವರ್ಲ್ಡ್ ವಾಹಿನಿ ಜೊತೆ ಮಾತನಾಡಿದ ಅವರು, ನಾನು ಬೆಂಗಳೂರಿನಿಂದ ಧರ್ಮಸ್ಥಳ ಮಾರ್ಗವಾಗಿ ಮಂಗಳೂರಿಗೆ ಪ್ರಯಾಣಿಸುತ್ತಿದ್ದಾಗ ವಗ್ಗ ಸಮೀಪ ಸಂಜೆ ಸುಮಾರು 4-5 ಗಂಟೆಯ ವೇಳೆ ನನಗೆ ಆ್ಯಂಬುಲೆನ್ಸ್ ಸಿಕ್ಕಿತ್ತು. ಆ್ಯಂಬುಲೆನ್ಸ್ ನನ್ನ ಕಾರಿನ ಮುಂದುಗಡೆಯಿಂದ ಪ್ರಯಾಣಿಸುತ್ತಿತ್ತು. ರಸ್ತೆ ಮಧ್ಯೆ ಹೊಂಡ ಸಿಕ್ಕಿದ್ದರಿಂದ ಆ್ಯಂಬುಲೆನ್ಸ್ ವೇಗವನ್ನು ಕಡಿಮೆ ಮಾಡಿತು. ಹಾಗಾಗಿ ನಾನು ಆ್ಯಂಬುಲೆನ್ಸ್ ಹಿಂದಿಕ್ಕಿ ಮುಂದೆ ಚಲಾಯಿಸಿದೆ. ಬಳಿಕ ಆ್ಯಂಬುಲೆನ್ಸ್ ಚಾಲಕ ಕೂಡ ನನ್ನ ಕಾರನ್ನು ಹಿಂದಿಕ್ಕಿ ಮುಂದೆ ಚಲಾಯಿಸಿದ್ದಾರೆ. ನಾನು ನನ್ನ ಪಾಡಿಗೆ ಹೋಗುತ್ತಿದ್ದರೂ ಮತ್ತೆ ಮತ್ತೆ ವಾಹನದ ವೇಗ ಕಡಿಮೆ ಮಾಡಿ ಮುಂದೆ- ಹಿಂದೆ ಹೋಗುವುದನ್ನು ಮಾಡುತ್ತಿದ್ದರು ಎಂದು ಹೇಳಿದ್ದಾರೆ.
ಇದರಲ್ಲಿ ನನ್ನ ತಪ್ಪು ಏನೂ ಇಲ್ಲ. ಅನೇಕ ಬಾರಿ ನಾನು ಆ್ಯಂಬುಲೆನ್ಸ್ಗೆ ಮುಂದೆ ಹೋಗಲು ಕೈಯಿಂದ ಸೂಚನೆ ಕೊಟ್ಟಿದ್ದೇನೆ. ಆದರೆ ಅವರು ಹೋಗಿರಲಿಲ್ಲ. ನಾವು ಆ್ಯಂಬುಲೆನ್ಸ್ಗೆ ದಾರಿ ಕೊಡದಷ್ಟು ಕೆಟ್ಟ ಜನ ಅಲ್ಲ. ಸೈರನ್ ಹಾಕಿದಾಗ ನಾವು ಯಾವುದೇ ವಾಹನಕ್ಕೂ ಜಾಗ ಕೊಡುತ್ತೇವೆ. ಜನರ ಕಷ್ಟಕ್ಕೆ ಸ್ಪಂದಿಸುತ್ತೇವೆ. ಅದರಲ್ಲೂ ಆ್ಯಂಬುಲೆನ್ಸ್ಗೆ ದಾರಿ ಕೊಡದೆ ಆಟವಾಡುವಷ್ಟು ಕೀಳು ಸ್ವಭಾವ ನಮ್ಮಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಉದ್ದೇಶಪೂರ್ವಕವಾಗಿಯೇ ಈ ಕೆಲಸ ಮಾಡಲಾಗಿದೆ. ನಾನು ಅಂತಹ ತಪ್ಪು ಮಾಡಿಲ್ಲ. ಒಂದುವೇಳೆ ನಾನು ಉದ್ದೇಶಪೂರ್ವಕವಾಗಿ ಈ ಕೆಲಸ ಮಾಡಿದ್ದೇನೆ ಎಂದಾದರೆ ನನಗೆ ಶಿಕ್ಷೆ ಸಿಗಲಿ ಎಂದು ಅಳಲು ತೋಡಿಕೊಂಡಿದ್ದಾರೆ.
ಸದ್ಯ ಮಂಗಳೂರು ನಿವಾಸಿಯಾಗಿರುವ ದಿನೇಶ್ ಪ್ರಭು ಟ್ಯಾಕ್ಸಿ ಡ್ರೈವರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.