ಮಂಗಳೂರು, ಸೆ 2 (MSP): ದೊಂಬಿ ಪ್ರಕರಣವೊಂದರಲ್ಲಿ ಭಾಗಿಯಾಗಿ 18 ವರ್ಷಗಳಿಂದ ನ್ಯಾಯಾಲಯಕ್ಕೆ ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ದೆಹಲಿ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ವಿಮಾನ ನಿಲ್ದಾಣದಲಿ ಸಿಕ್ಕಿಬಿದ್ದಿದ್ದು, ಆತನನ್ನು ಕೊನೆಗೂ ಬಜ್ಪೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಬಗುಳಿಪಾಡಿ ಸೂರಲ್ಪಾಡಿ ನಿವಾಸಿ ಫಯಾಝ್ ಆಲಂ (43) ಎಂದು ಗುರುತಿಸಲಾಗಿದೆ. ಇವನು 2000ನೇ ಇಸವಿಯಲ್ಲಿ ನಡೆದ ದೊಂಬಿ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾನೆ. 18 ವರ್ಷಗಳಿಂದ ವಿಚಾರಣೆಗೆ ಹಾಜರಾಗಿರಲಿಲ್ಲ. ನ್ಯಾಯಾಲಯ ಈತನ ಬಂಧನಕ್ಕೆ ವಾರೆಂಟ್ ಹೊರಡಿಸಿತ್ತು.
ಲುಕ್ ಔಟ್ ನೋಟೀಸ್
ಫಯಾಝ್ ಆಲಂ ನನ್ನು ಪೊಲೀಸರು ಹುಡುಗಾಡುತ್ತಿದ್ದಾಗ, ಆತ ವಿದೇಶಕ್ಕೆ ಪರಾರಿಯಾಗಲು ಪ್ರಯತ್ನಿಸುತ್ತಿರುವ ಮಾಹಿತಿ ಲಭಿಸಿತ್ತು. ತಕ್ಷಣವೇ ಬಜ್ಪೆ ಪೊಲೀಸ್ ಠಾಣೆಯ ವಿನಂತಿ ಮೇರೆಗೆ ಮಂಗಳೂರು ಪೊಲೀಸ್ ಕಮಿಷನರ್ ಆತನ ಪತ್ತೆಗೆ ಲುಕ್ ಔಟ್ ನೋಟಿಸ್ ಜಾರಿಮಾಡಿ, ದೇಶದ ಎಲ್ಲ ವಿಮಾನ ನಿಲ್ದಾಣಗಳಿಗೂ ರವಾನಿಸಲಾಗಿತ್ತು. ಅಂತೆಯೇ ಆ. ೩೧ ರ ಶುಕ್ರವಾರ ಆರೋಪಿಯು ದೆಹಲಿ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ಪರಾರಿಯಾಗಲು ಹೊರಟಿದ್ದ. ಲುಕ್ ಔಟ್ ನೋಟಿಸ್ ಆಧರಿಸಿ ಅಲ್ಲಿನ ಇಮಿಗ್ರೇಷನ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ. ಬಜ್ಪೆ ಪೊಲೀಸರು ಆತನನ್ನು ಬಂಧಿಸಿ ಸೆ. ೧ ರಂದು ನ್ಯಾಯಲಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.