ಮಂಗಳೂರು, ಅ 4: ಕರಾವಳಿಯ ಜನರಿಂದ ಭಕ್ತಿಯಿಂದ ಆರಾಧಿಸಲ್ಪಡುವ ಕೊರಗಜ್ಜ ದೈವದ ಬಗ್ಗೆ ಯಾರಿಗ್ ತಾನೇ ಗೊತ್ತಿಲ್ಲ ಹೇಳಿ. ಕೊರಗ ಜನಾಂಗದ ಸಾಂಸ್ಕೃತಿಕ ನಾಯಕ ಹಾಗೂ ಕುಲದೈವ ಈ ಕೊರಗಜ್ಜ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಕ್ಕೆ ಸಂಬಂಧಿಸಿದ ಅವಹೇಳನಕಾರಿ ಹೇಳಿಕೆಗಳು ಹೆಚ್ಚಾಗಿ ಪ್ರಕಟವಾಗುತ್ತಿದ್ದು, ತುಳುವರ ಆರಾಧ್ಯ ದೈವ ಕೊರಗಜ್ಜನಿಗೂ ಅವಮಾನಿಸಿದ ಘಟನೆಯೊಂದು ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಕೊರಗಜ್ಜನನ್ನು ನಿಂದಿಸಿ ಪ್ರಕಟವಾಗಿರುವ ಹೇಳಿಕೆಯನ್ನು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ತೀವ್ರವಾಗಿ ಖಂಡಿಸಿದೆ.
ಏಂಜಲ್ ನಯನ ಪ್ರಜ್ವಲ್ ಎಂಬ ನಾಮಾಂಕಿತ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಬರವಣಿಗೆಯನ್ನು ಪ್ರಕಟಿಸಿದ್ದು, ಆಕೆಯ ಫೇಸ್ ಬುಕ್ ಪೇಜನ್ನು ನಿರ್ಬಂಧಿಸಿ ಕೂಡಲೇ ಬಂಧಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಒತ್ತಾಯಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುತ್ತಿರುವ ಅಮಾನವೀಯ ದಾಳಿಗಳನ್ನು ನಿಯಂತ್ರಿಸದಿದ್ದರೆ ಕೊರಗರು ಬೀದಿಗಿಳಿದು ಪ್ರತಿಭಟಿಸಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ಎಚ್ಚರಿಕೆಯನ್ನು ನೀಡಿದ್ದಾರೆ.