ಕುಂದಾಪುರ, ಸೆ 02 (MSP): ಕುಂದಾಪುರ ಬಸ್ರೂರು ಕಳಂಜೆಯ ಶಂಕರ ಪೂಜಾರಿ ನಿರಪರಾಧಿಯಾಗಿದ್ದು, ಅವರ ಬಿಡುಗಡೆಗೆ ನಾವೂ ನಮ್ಮ ಕೈಲಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಅವರು ಮಾತ್ರೆಯ ಜತೆಗೆ ನಾವು ನೀಡಿದ್ದ ಔಷಧ ಚೀಟಿಯನ್ನು ಮನೆಯಲ್ಲಿ ಬಿಟ್ಟು ಹೋಗಿದ್ದರಿಂದ ಅವರು ಕುವೈತ್ ನಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ ಎಂದು ಪಾತಿಮಾ ಅವರ ಸಂಬಂಧಿ ಮುಬಾರಕ್ ಅಲಿ ತಿಳಿದ್ದಾರೆ.
ಉಡುಪಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ನನ್ನ ಅತ್ತೆಯವರಾದ ತಸ್ಲೀಮ್ ಫಾತಿಮಾರ ವಿನಂತಿಯಂತೆ ಕೆಎಂಸಿಯ ವೈದ್ಯರು ನೀಡಿದ ಔಷಧಿಯ ಚೀಟಿಯ ಆಧಾರದಲ್ಲಿ ಮೂರು ವಿಧದ ಮಾತ್ರೆಗಳನ್ನು ಶಂಕರ್ ಅವರೊಂದಿಗೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ.
ಶಂಕರ್ ಅವರಿಗೆ ನೀಡಿದ ಮಾತ್ರೆಗಳ ಬಗ್ಗೆ ಕುವೈತ್ ನಲ್ಲಿ ನಿಷೇಧವಿದೆ ಎಂಬ ವಿಚಾರ ನನಗೆ ತಿಳಿದಿಲ್ಲ. ನಾವೆಲ್ಲ ಅವರ ಬಿಡುಗಡೆಗೆ ಪ್ರಯತ್ನ ಮಾಡುತ್ತೇವೆ. ಮೆಡಿಕಲ್ ಶಾಪ್ ನಲ್ಲಿ ಖರೀದಿಸಿದ ಬಿಲ್ ನೊಂದಿಗೆ ಮಾತ್ರೆಗಳನ್ನು ಶಂಕರ ಪೂಜಾರಿ ಅವರ ಕೈಯಲ್ಲಿ ಕೊಟ್ಟಿದ್ದಲ್ಲದೇ, ಅದರೊಂದಿಗೆ ನಮ್ಮ ಮನೆಯಲ್ಲಿಯೇ ಮಾಡಿದ ಸಿಹಿತಿಂಡಿಯನ್ನು ಸಹ ಕಳುಹಿಸಿಕೊಟ್ಟಿದ್ದೇನೆ. ಅದರ ಬದಲು ಸಿಹಿತಿಂಡಿಯಲ್ಲಿ ಯಾವುದೇ ಮಾತ್ರೆಗಳನ್ನು ಹುದುಗಿಸಿ ಕೊಟ್ಟಿಲ್ಲ ಎಂದು ಅಳಲು ತೊಡಿಕೊಂಡರು.
ಜೂ.10 ರಂದು 210 ಮಾತ್ರೆಗಳನ್ನು ಖರೀದಿಸಿ, ಮಾತ್ರೆಗಳ ಬಿಲ್ನ ಮೂಲಪ್ರತಿಯನ್ನು ಬ್ಯಾಗ್ನಲ್ಲಿ ಹಾಕಿಕೊಟ್ಟಿದ್ದೆ. ಆದರೆ ಶಂಕರ ಪೂಜಾರಿ ಅವರು ಕುವೈತ್ಗೆ ಹೋಗುವಾಗ ಮಾತ್ರೆಯ ಕಟ್ಟನ್ನು ಮಾತ್ರ ಒಯ್ದಿದ್ದು, ಔಷಧದ ಚೀಟಿ ಮತ್ತು ಬಿಲ್ನ ಮೂಲ ಪ್ರತಿಯನ್ನು ಮನೆಯಲ್ಲಿ ಬಿಟ್ಟುಹೋಗಿದ್ದರು. ಕೊಂಡೊಯ್ದ ಮಾತ್ರೆಗೆ ಸರಿಯಾದ ದಾಖಲೆಗಳು ಇಲ್ಲದ ಕಾರಣ ಕುವೈತ್ನ ಪೊಲೀಸರು ಜೂನ್ 13ರಂದು ಕುವೈತ್ ವಿಮಾನ ನಿಲ್ದಾಣದಲ್ಲಿ ಶಂಕರ್ರನ್ನು ಬಂಧಿಸಿದ್ದರು. ಈ ವಿಷಯ ನಮಗೆ 20 ದಿನಗಳ ಬಳಿಕ ಶಂಕರ್ ಅವರ ಪತ್ನಿ ಜ್ಯೋತಿ ಅವರಿಂದ ತಿಳಿಯಿತು ಎಂದು ಮುಬಾರಕ್ ಅಲಿ ತಿಳಿಸಿದರು. ನನ್ನ ಅತ್ತೆ ಫಾತಿಮಾ ಹಲವು ವರ್ಷಗಳಿಂದ ಕುವೈತ್ ನ ಮನೆಯೊಂದರಲ್ಲಿ ಮನೆಗೆಲಸ ಮಾಡಿಕೊಂಡಿದ್ದಾರೆ, ಶಂಕರ್ ಬಂಧನವಾಗಿದ್ದ ಸಂದರ್ಭದಲ್ಲಿ ,ಅವರು ಮನೆಯ ಮಾಲೀಕರ ಜತೆಗೆ ಹಜ್ ಯಾತೆಗೆ ತೆರಳಿದ್ದರಿಂದ ಬಂಧನ ಮಾಹಿತಿ ತಿಳಿದಿರಲಿಲ್ಲ ಎಂದರು.
ಆದರೆ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ಅವರು ನಿಜಾಂಶ ಅರಿಯದೇ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಲ್ಲದೆ ಹಣದ ಬೇಡಿಕೆ ಇಟ್ಟಿದ್ದಾರೆ. ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದೆ ಶಂಕರ ಪೂಜಾರಿ ಅವರ ಬಿಡುಗಡೆಗೆ ಪ್ರಯತ್ನ ಮುಂದುವರಿಸಿದ್ದೇವೆ. ಇಡೀ ಪ್ರಕರಣದಲ್ಲಿ ಶಂಕರ ಪೂಜಾರಿ ನಿರಪರಾಧಿಯಾಗಿದ್ದು, ನಾವು ಕಳುಹಿಸಿದ ಮಾತ್ರೆಗಳಿಗೆ ಕುವೈತ್ನಲ್ಲಿ ನಿಷೇಧವಿದೆ ಎಂಬ ವಿಷಯ ಅರಿಯದೇ ಕಳುಹಿಸಿದ್ದರಿಂದ ತೊಂದರೆಗಳು ಎದುರಾಗಿದೆ . ಶಂಕರ್ ಬಿಡುಗಡೆಗೆ ನಮ್ಮ ಕೈಲಾದ ಎಲ್ಲಾ ಪ್ರಯತ್ನ ಹಾಗೂ ಸಹಾಯವನ್ನು ಮಾಡುತ್ತೇವೆ ಎಂದು ಮುಬಾರಕ್ ಅಲಿ ಹೇಳಿದ್ದಾರೆ.