ಪಡುಬಿದ್ರಿ, ಸೆ 2(SM): ರಾಷ್ಟ್ರೀಯ ಹೆದ್ದಾರಿ ಹೋರಾಟಗಾರರ ಪ್ರತಿಭಟನೆಗೆ ಮಣಿದು ಹೆಜಮಾಡಿ ಹಳೆ ಎಂಬಿಸಿ ರಸ್ತೆಯಲ್ಲಿ ಸಾಗುವ ಸ್ಥಳೀಯ ಏಳು ಕಿಮೀ ವ್ಯಾಪ್ತಿಯ ಕೆಎ 19 ನೋಂದಣಿಯ ಲಘು ವಾಹನಗಳಿಗೆ ಟೋಲ್ ವಿನಾಯಿತಿ ನೀಡಲಾಗುವುದು ಎಂದು ನವಯುಗ ಟೋಲ್ ವ್ಯವಸ್ಥಾಪಕ ರವಿಬಾಬು ತಿಳಿಸಿದರು. ಹೆಜಮಾಡಿಯ ಹಳೆ ಎಂಬಿಸಿ ರಸ್ತೆಗೆ ಟೋಲ್ಗೇಟ್ ಅಳವಡಿಸಿರುವುದನ್ನು ಖಂಡಿಸಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ಭಾನುವಾರ ನಡೆದ ಪ್ರತಿಭಟನೆ ಬಳಿಕ ಕಾಪು ತಹಶೀಲ್ದಾರ್ ಗುರುಸಿದ್ದಯ್ಯ ಹೀರೆಮಠ್ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಅವರು ಈ ತೀರ್ಮಾನ ಕೈಗೊಂಡಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಸರ್ವಿಸ್ ಬಸ್, ಶಾಲಾ ಬಸ್ ಹಾಗೂ ಲಘು ಗೂಡ್ಸ್ ವಾಹನಗಳಿಗೂ ವಿನಾಯಿತಿ ನೀಡಲಾಗುವುದು. ಘನ ವಾಹನಗಳು ಟೋಲ್ ವಿನಾಯಿತಿಗೆ ಒಳಪಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಲಘು ವಾಹನಗಳು ಸೂಕ್ತ ಗುರುತು ಕಾರ್ಡ್ ತೋರಿಸಿ ಸಂಚರಿಸಬೇಕು ಎಂದರು.
ಇನ್ನು ಯಾವುದೇ ಪೂರ್ವ ತಯಾರಿ ಇಲ್ಲದೆ ಟೋಲ್ ಸಂಗ್ರಹ ಆರಂಭಿಸಲಾಗಿದೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ತೊಂದರೆಯಾಗಿದೆ. ಗ್ರಾಮ ಪಂಚಾಯಿತಿಯ ಯಾವುದೇ ಬೇಡಿಕೆಗಳನ್ನು ಈಡೇರಿಸಲಾಗಿಲ್ಲ. ಏಕಾಏಕಿ ಟೋಲ್ಗೆ ಮುಂದಾಗುವುದು ಸರಿಯಲ್ಲ. ಈ ತಿಂಗಳಾಂತ್ಯದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಅದುವರೆಗೂ ಟೋಲ್ ಆರಂಭಿಸುವುದು ಬೇಡ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು.
ನವಯುಗ್ ಕಂಪನಿಯು ಹೆಜಮಾಡಿ ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ಟೋಲ್ ಪ್ಲಾಝಾ ಆರಂಭಿಸಿದ ಬಳಿಕ ಸಹಸ್ರಾರು ವಾಹನಗಳು ಹೆಜಮಾಡಿ ಒಳ ರಸ್ತೆಯಲ್ಲಿ ನಿರಂತರ ಚಲಿಸಿದ ಕಾರಣ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಲೋಕೋಪಯೋಗಿ ವ್ಯಾಪ್ತಿಗೆ ಬರುವ ಈ ರಸ್ತೆಯನ್ನು ನವಯುಗ ಕಂಪೆನಿ ದುರಸ್ತಿ ಮಾಡಬೇಕು. ಹೆಜಮಾಡಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿ ಬಳಿ ಸ್ಕೈವಾಕ್ ನಿರ್ಮಾಣ, ಗ್ರಾಮಕ್ಕೆ ಶುದ್ಧಕುಡಿಯುವ ನೀರಿನ ಯೋಜನೆ, ದಾರಿದೀಪದ ವ್ಯವಸ್ಥೆ ಹಾಗೂ ಕನ್ನಂಗಾರ್ ಬೈಪಾಸ್ ಬಳಿ ಹೆಜಮಾಡಿಗೆ ಸಂಪರ್ಕ ಕಲ್ಪಿಸುವಲ್ಲಿ ಶೀಘ್ರವಾಗಿ ಸರ್ವಿಸ್ ರಸ್ತೆ ನಿರ್ಮಾಣ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಇತರ ಬೇಡಿಕೆಗಳ ಬಗ್ಗೆ ಸೆಪ್ಟೆಂಬರ್ 30ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಸ್ಪಷ್ಟ ಪಡಿಸಿದರು.
ಸರ್ವಿಸ್ ಬಸ್ ಚಾಲಕರಿಂದ ದಿಢೀರ್ ಪ್ರತಿಭಟನೆ:
ಹೆಜಮಾಡಿ ಒಳರಸ್ತೆಯಲ್ಲಿ ಟೋಲ್ ಸಂಗ್ರಹ ವಿರೋಧಿಸಿ ಈ ಮಾರ್ಗದಲ್ಲಿ ಸಂಚರಿಸುವ ಸರ್ವೀಸ್ ಬಸ್ಸಿನವರು ಟೋಲ್ ಬಳಿ ಬಸ್ಗಳನ್ನು ಎರಡು ಗಂಟೆಗಳ ಕಾಲ ನಿಲುಗಡೆ ಮಾಡಿ ಭಾನುವಾರ ದಿಢೀರನೆ ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದರು. ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ಪಿ ಬೆಳ್ಳಿಯಪ್ಪ ಮಾತುಕತೆ ನಡೆಸಿ ಎರಡು ದಿನಗಳ ಕಾಲ ಸರ್ವೀಸ್ ಬಸ್ಗಳಿಗೆ ಟೋಲ್ಗೆ ವಿನಾಯಿತಿ ನೀಡುವ ನಿರ್ಧಾರಕ್ಕೆ ಬಂದು, ಪ್ರತಿಭಟನೆ ಹಿಂದೆಗೆದುಕೊಳ್ಳಲಾಯಿತು.