ಮಂಗಳೂರು, ಸೆ 2(SM): ಸರಕಾರಿ ಕಾರ್ಯಕ್ರಮಕ್ಕೆ ಗೈರು ಹಾಜರಾದ ಹಿನ್ನೆಲೆ ದ.ಕ. ಜಿಲ್ಲಾಧಿಕಾರಿಗಳ ವಿರುದ್ಧ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಗರಂ ಆಗಿದ್ದಾರೆ. ಜಿಲ್ಲಾಧಿಕಾರಿಗಳ ಕ್ರಮವನ್ನು ಸಚಿವರು ಖಂಡಿಸಿದ್ದಾರೆ.
ದ.ಕ. ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಟೌನ್ ಹಾಲ್ ನ ಮಿನಿ ಹಾಲ್ ನಲ್ಲಿ ನಡೆದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಗೈರು ಹಾಜರಾಗಿದ್ದರು. ಜಿಲ್ಲಾಧಿಕಾರಿಗಳ ಬದಲು ಅಪರ ಜಿಲ್ಲಾಧಿಕಾರಿಗಳು ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಈ ವೇಳೆ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯನ್ನು ಸಚಿವರು ಪ್ರಶ್ನಿಸಿದ್ದಾರೆ. ಜಿಲ್ಲಾಧಿಕಾರಿಗಳು ಸರಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗದಿದ್ದರೆ ಮತ್ತೆ ಯಾವ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ? ಕೇವಲ ಶಾಸಕ, ಸಚಿವರಿಗೆ ಕಾರ್ಯಕ್ರಮ ಮೀಸಲಾಗಿದೆಯೇ? ಎಂದು ಸಚಿವರು ಖಾರವಾಗಿ ಪ್ರಶ್ನಿಸಿದ್ದಾರೆ. ಈ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿ, ಸಿಎಂಗೆ ಪತ್ರ ಬರೆಯಲಾಗುವುದೆಂದು ಸಚಿವ ಖಾದರ್ ಹೇಳಿದ್ದಾರೆ.