ಕುಂದಾಪುರ ಅ 3: ಮಂಗಳವಾರ ಇಹಲೋಕ ತ್ಯಜಿಸಿದ ಯಕ್ಷಗಾನ ಕಲಾವಿದ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಅಂತಿಮ ದರ್ಶನ ಬ್ರಹ್ಮಾವರ, ಸಾಲಿಗ್ರಾಮ, ಕೋಟದಲ್ಲಿ ಜರುಗಿತು. ಸಾಲಿಗ್ರಾಮದಲ್ಲಿರುವ ಯಕ್ಷಗಾನ ಕಲಾಕೇಂದ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದ್ದು ಯಕ್ಷಗಾನ ಕಲಾಕೇಂದ್ರದ ಅಧ್ಯಕ್ಷರಾದ ಆನಂದ ಸಿ. ಕುಂದರ್ "ಕಶೆ ಸೀರೆ" ಹೊದೆಸಿ ಗೌರವಾರ್ಪಣೆ ಸಲ್ಲಿಸಿದರು. ನಂತರ ನೂರಾರು ಅಭಿಮಾನಿಗಳು ಚಿಟ್ಟಾಣಿಯವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಇನ್ನೂ ಕೋಟದಲ್ಲಿ ಚಿಟ್ಟಾಣಿ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಸೇರಿದ್ದು, ಸುಮಾರು ಹತ್ತು ನಿಮಿಷಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಕೋಟ ಅಮೃತೇಶ್ವರಿ ದೇವಳದ ಯಕ್ಷಗಾನ ಮೇಳದಲ್ಲಿ ಸೇವೆ ಸಲ್ಲಿಸಿದ್ದ ಚಿಟ್ಟಾಣಿವರಿಗೆ ಅಮೃತೇಶ್ವರಿ ಮೇಳದ ಕುರಿತು ವಿಶೇಷ ಅಭಿಮಾನ ಕೂಡ ಇತ್ತು. ಈ ಸಂದರ್ಭ ಊರಿನ ಗಣ್ಯರು ನೂರಾರು ಸಂಖ್ಯೆ ಚಿಟ್ಟಾಣಿ ಅಭಿಮಾನಿಗಳು ಚಿಟ್ಟಾಣಿಯವರ ಅಂತಿಮ ದರ್ಶನ ಪಡೆದರು. ಈ ಸಂಧರ್ಭ ಕುಂದಾಪುರ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಸಹ ಕೋಟದಲ್ಲೇ ಅಂತಿಮ ನಮನ ಸಲ್ಲಿಸಿದರು.ಕುಂದಾಪುರದಲ್ಲೂ ಯಕ್ಷಾಭಿಮಾನಿಗಳು ಮತ್ತು ಸಾರ್ವಜನಿಕರಿಂದ ಚಿಟ್ಟಾಣಿಯವರಿಗೆ ಅಂತಿಮ ನಮನ ಸಲ್ಲಿಸಲಾಯಿತು. ನೂರಾರು ಸಂಖ್ಯೆಯ ಅಭಿಮಾನಿಗಳು ಚಿಟ್ಟಾಣಿಯವರಿಗೆ ಅಂತಿಮ ನಮನ ಸಲ್ಲಿಸಿದರು.