ಹೈದರಾಬಾದ್, ಸೆ 4 (MSP): ಅಪ್ಪ ಮತ್ತು ಮಗಳು ಪೊಲೀಸ್ ಇಲಾಖೆಯಲ್ಲಿ ಕಿರಿಯ ಮತ್ತು ಹಿರಿಯ ಅಧಿಕಾರಿಗಳಾಗಿ ಎದುರುಬದುರಾದರೆ ಹೇಗಿರುತ್ತದೆ? ಹೌದು ಇಂತಹ ಅಪರೂಪದ ಹೃದಯ ತುಂಬುವ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ಹೈದರಾಬಾದ್ನಲ್ಲಿ ನಡೆದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ರ್ಯಾಲಿ. ತೆಲಂಗಾಣ ಪೊಲೀಸ್ ಇಲಾಖೆಯಲ್ಲಿ ಡಿಸಿಪಿಯಾಗಿರುವ ಎ.ಆರ್. ಉಮಾಮಹೇಶ್ವರ ಶರ್ಮ ಮತ್ತು ಅವರ ಐಪಿಎಸ್ ಅಧಿಕಾರಿಯಾದ ಪುತ್ರಿ ಸಿಂಧೂ ಶರ್ಮ ಅವರ ಕಥೆ. ಅವರು ಎಸ್ಪಿ ಸಿಂಧು ಶರ್ಮ ಅವರು ಎದುರಾಗುತ್ತಿದ್ದಂತೆಯೇ ಕಾಲನ್ನು ನೆಲಕ್ಕೆ ಬಡಿದು ಸೆಲ್ಯೂಟ್ ಹೊಡೆದರು. ಈ ದೃಶ್ಯವನ್ನು ನೋಡಿ ಅಲ್ಲಿದ್ದವರೆಲ್ಲ ಒಂದು ಕ್ಷಣ ದಂಗಾದರು. ಯಾಕೆಂದರೆ, ಉಮಾಮಹೇಶ್ವರ ಶರ್ಮ ಅವರು ಸೆಲ್ಯೂಟ್ ಹೊಡೆದಿದ್ದು ತಮ್ಮದೇ ಮಗಳಿಗೆ!
ಹೌದು, ಕಳೆದ ನಾಲ್ಕು ವರ್ಷದ ಹಿಂದೆಯೇ ಮಗಳು ಎಸ್ಪಿ ಹುದ್ದೆಯನ್ನೇರಿದರೂ ಕೂಡಾ ಕರ್ತವ್ಯದಲ್ಲಿದ್ದಾಗ ಮುಖಾಮುಖಿಯಾಗಿದ್ದು ಇದೇ ಮೊದಲು. ಜಗಿತ್ಯಾಲ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಂಧೂ ಶರ್ಮ ಪರಿಶೀಲನೆಗಾಗಿ ಅಲ್ಲಿಗೆ ಬಂಧಿದ್ದರು. ಇದೇ ರ್ಯಾಲಿಯಲ್ಲಿ ಶರ್ಮಾ ಸಮಾವೇಶದ ಭದ್ರತೆಗಾಗಿ ನಿಯೋಜನೆಗೊಂಡಿದ್ದರು. ಅಲ್ಲಿ ತಂದೆ ಮಗಳಿಬ್ಬರು ಎದುರಾದಾಗ ಡಿಸಿಪಿ ಶರ್ಮ ಕೇವಲ ಒಬ್ಬ ಪೊಲೀಸ್ ಅಧಿಕಾರಿಯಂತೆ ವರ್ತಿಸಿ, ಹಿರಿಯ ಅಧಿಕಾರಿಯಾಗಿರುವ ಮಗಳಿಗೆ ಗೌರವದಿಂದ ಸೆಲ್ಯೂಟ್ ಹೊಡೆದರು. ಇದು ಘಟನೆ ಈಗ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಮಾ ಮಹೇಶ್ವರ್, "ಕರ್ತವ್ಯದ ವಿಚಾರದಲ್ಲಿ ಮಗಳು ನನ್ನ ಹಿರಿಯ ಅಧಿಕಾರಿಯಾದ್ದರಿಂದ ಅವರನ್ನು ನೋಡಿದ ಕೂಡಲೇ ಸೆಲ್ಯೂಟ್ ಹೊಡೆದೆ. ಮನೆಯಲ್ಲಿ ನಾವಿಬ್ಬರು ತಂದೆ-ಮಗಳ ಹಾಗೇ ಇರುತ್ತೇವೆ. ಆದರೆ, ಕರ್ತವ್ಯದಲ್ಲಿರುವಾಗ ಇಬ್ಬರ ಹುದ್ದೆ, ಕರ್ತವ್ಯಗಳನ್ನು ಗೌರವಿಸುತ್ತೇನೆ" ಎಂದಿದ್ದಾರೆ.
ಅಂದ ಹಾಗೆ ಕಳೆದ ಮೂವತ್ತು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಉಮಾಮಹೇಶ್ವರ ಶರ್ಮ ಈಗ ಮಲ್ಕಾಜ್ಗಿರಿಯ ಡಿಸಿಪಿ. ಎಸ್ಐ ಹಂತದಿಂದ ಮೇಲೇರಿದ ಅವರು ಮುಂದಿನ ವರ್ಷ ನಿವೃತ್ತರಾಗಲಿದ್ದಾರೆ. 2014ರಲ್ಲಿ ಸಿಂಧು ಶರ್ಮ ಐಪಿಎಸ್ ಮುಗಿಸಿದ್ದರು. ಘಟನೆ ಬಗ್ಗೆ ಎಸ್ಪಿ ಸಿಂಧೂ ಶರ್ಮ ಪ್ರತಿಕ್ರಿಯಿಸಿ ರ್ಯಾಲಿಯ ವೇಳೆ ನಾನು ಮಹಿಳೆಯರ ಭದ್ರತೆ ನೋಡಿಕೊಳ್ಳುತ್ತಿದ್ದೆ. ಇಬ್ಬರಿಗೂ ಜತೆಯಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ತುಂಬ ಖುಷಿಯಾಯಿತು ಎಂದಿದ್ದಾರೆ.