ಕಡಬ, ಸೆ 4 (MSP): ರೇಬಿಸ್ ವೈರಾಣು ಸೋಂಕುನಿಂದ ಮೃತಪಟ್ಟ ಯುವಕನೊಬ್ಬನ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ 170 ಕ್ಕೂ ಹೆಚ್ಚು ಜನ ರೇಬಿಸ್ ರೋಗ ಹರಡುವ ಭಯದಿಂದ, ರೇಬಿಸ್ ನಿರೋಧಿ ಚುಚ್ಚು ಮದ್ದು ಪಡೆದ ಘಟನೆ ಕಡಬದ ಇಚ್ಲಂಪಾಡಿ ಕಾಯರ್ತಡ್ಕ ದಲ್ಲಿ ನಡೆದಿದೆ.
ಕಳೆದ 5 ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಇಚ್ಲಂಪಾಡಿ ಕಾಯರ್ತಡ್ಕ ನಿವಾಸಿ ಆನಂದ ಪೂಜಾರಿಯವರ ಪುತ್ರ, ಸುಳ್ಯದ ಕೆ.ವಿ.ಜಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಒಂದೂವರೆ ತಿಂಗಳ ಹಿಂದೆಯಷ್ಟೇ ಎಂಜಿನಿಯರಿಂಗ್ ಪದವಿ ಮುಗಿಸಿದ್ದ ಯುವ ಎಂಜಿನಿಯರ್ ಆಶಿತ್ (24) ಮೃತಪಟ್ಟಿದ್ದರು. ಆತನ ಮೃತದೇಹವನ್ನು ಮನೆಯವರಿಗೆ ಹಸ್ತಾಂತರಿಸುವ ಸಂದರ್ಭದಲ್ಲಿ, ಆಸ್ಪತ್ರೆಯ ವೈದ್ಯರು, ಆತ ಸಂಶಯಿತ ರೇಬಿಸ್ ವೈರಾಣು ಸೋಂಕು ನಿಂದ ಮೃತಪಟ್ಟಿದ್ದಾರೆ ಎಂಬ ಕಾರಣ ನೀಡಿ ಮೃತದೇಹವನ್ನು ಆಸ್ಪತ್ರೆಯಿಂದ ಪ್ಯಾಕ್ ಮಾಡಿ ಕೊಟ್ಟಿದ್ದು, ಮನೆಯಲ್ಲಿ ನೀರು ಬಿಟ್ಟು, ಪ್ಯಾಕ್ ತೆರೆಯದೆ ನೇರ ಸ್ಮಶಾನಕ್ಕೆ ಕೊಂಡೊಯ್ಯುವಂತೆ ಸೂಚಿಸಿದ್ದರು ಎನ್ನಲಾಗಿದೆ. ಆದರೆ ಮನೆ ಮಂದಿ ಇದನ್ನು ನಿರ್ಲಕ್ಷಿಸಿ ಸಂಪ್ರದಾಯದಂತೆ ಅಂತ್ಯಸಂಸ್ಕಾರವನ್ನು ನಿರ್ವಹಿಸಿದ್ದರು. ಈ ಅಂತ್ಯ ಸಂಸ್ಕಾರದಲ್ಲಿ ಜನಪ್ರತಿನಿಧಿಗಳ ಸಹಿತ ವಿವಿಧ ಕ್ಷೇತ್ರಗಳ ಗಣ್ಯರು ಸಹಿತ ನೂರಾರು ಮಂದಿ ಭಾಗಿಯಾಗಿ ಮೃತದೇಹಕ್ಕೆ ನೀರು ಬಿಡುವ ಸಂಸ್ಕಾರ ನೆರವೇರಿಸಿದ್ದರು.
ಆದರೆ ಮರುದಿನ ಸಾವು ರೇಬೀಸ್ ರೋಗದಿಂದ ಸಂಭವಿಸಿದೆ ಎನ್ನುವ ಸುದ್ದಿ ಹಬ್ಬಿ ಊರವರೆಲ್ಲರೂ ಬೆಚ್ಚಿ ಬಿದ್ದಿದ್ದಾರೆ. ರೇಬಿಸ್ ರೋಗ ಹರಡುವ ಆತಂಕ ಊರಲ್ಲೆಲ್ಲಾ ಹಬ್ಬಿದ್ದು ಅಂತಿಮಸಂಸ್ಕಾರದಲ್ಲಿ ಭಾಗಿಯಾದ 69ಕ್ಕೂ ಅಧಿಕ ಮಂದಿ ನೆಲ್ಯಾಡಿ ಸರಕಾರಿ ಆರೋಗ್ಯ ಕೇಂದ್ರದಲ್ಲಿ ರೇಬೀಸ್ ಚುಚ್ಚುಮದ್ದನ್ನು ಪಡೆದಿದ್ದಾರೆ. ನಾಲ್ಕು ದಿನದ ಬಳಿಕ 2 ನೇ ಇಂಜೆಕ್ಷನ್ ತೆಗೆದುಕೊಳ್ಳಬೇಕಾದ್ದರಿಂದ ಸರಕಾರಿ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳು ಭಾನುವಾರವೂ ಸೇವೆ ನೀಡಿದ್ದಾರೆ. ಇನ್ನು ಕೆಲವು ಮಂದಿ ಖಾಸಗಿ ಚಿಕಿತ್ಸಾಲಯದಲ್ಲೂ ಇಂಜೆಕ್ಷನ್ ಪಡೆದಿದ್ದಾರೆ ಎನ್ನಲಾಗಿದೆ. ಇದೇ ಭೀತಿಯಿಂದ ಸರ್ಕಾರಿ ಆಸ್ಪತ್ರೆಗೆ 500 ಇಂಜೆಕ್ಷನ್ ತರಿಸಿಕೊಳ್ಳಲಾಗಿದೆ. ಅಂತ್ಯಸಂಸ್ಕಾರದ ವೇಳೆ ಮೃತದೇಹದಿಂದ ರಕ್ತ ಹಾಗೂ ಎಂಜಲು ಚೆಲ್ಲಿದ್ದಲ್ಲಿ ಇದರಿಂದ ರೇಬೀಸ್ ವೈರಾಣು ಹರಡುವ ಸಾಧ್ಯತೆಯಿದೆ ಎನ್ನುವ ಅಭಿಪ್ರಾಯವನ್ನು ನೆಲ್ಯಾಡಿ ಸರಕಾರಿ ಆರೋಗ್ಯ ಕೇಂದ್ರದ ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಶಿತ್ ಮನೆ ಮಂದಿ ಆತನಿಗೆ ಯಾವುದೇ ಪ್ರಾಣಿ ಕಚ್ಚಿರುವ ಮಾಹಿತಿ ಇಲ್ಲ, ಈ ಬಗ್ಗೆ ಕಾಲೇಜು ಶಿಕ್ಷಕರು ಅಥವಾ ಸಹಪಾಠಿ, ರೂಮ್ ಮೇಟ್ ಗಳಿಗೂ ತಿಳಿದಿಲ್ಲ. ವರ್ಷದ ಹಿಂದೆ ಆತನಿಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಎರಡು ದಿನದ ಹಿಂದೆ ತೋಟಕ್ಕೆ ಮದ್ದು ಸಿಂಪಡಿಸುತ್ತಿದ್ದಾಗ ಕಾಲು ನೋವು ಕಾಣಿಸಿಕೊಂಡು ಎಲುಬು ತಜ್ಞರಲ್ಲಿ ತೋರಿಸಿ ಅವರ ಸಲಹೆ ಮೇರೆಗೆ ಪುತ್ತೂರಿಗೆ ದಾಖಲಿಸಲಾಗಿತ್ತು. ಬಳಿಕ ನೀರು ಕುಡಿಯಲು ಸಾಧ್ಯವಾಗದ ಹಿನ್ನಲೆಯಲ್ಲಿ ಮಂಗಳೂರಿಗೆ ದಾಖಲಿಸಲಾಗಿತ್ತು. ಆತ ಮೃತಪಡುವ 3 ಗಂಟೆಗೂ ಮುಂಚೆ ಚೆನ್ನಾಗಿಯೇ ಮಾತನಾಡಿಕೊಂಡಿದ್ದ ಎಂದು ಆತನ ಸಹೋದರ ತಿಳಿಸಿದ್ದಾರೆ.