ಕಟಪಾಡಿ, ಸೆ 4 (MSP): ಅಕ್ರಮ ಕಸಾಯಿಖಾನೆ ಮತ್ತು ಕಾಳದಂಧೆ ಕೋರರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಎಸ್ಐ ನಿತ್ಯಾನಂದ ಗೌಡ ಇಪ್ಪತ್ತೇ ದಿನದಲ್ಲಿ ಎರಡು ಬಾರಿ ಎತ್ತಂಗಡಿಯಾಗಿದ್ದಾರೆ. ಕಾಪುವಿನಲ್ಲಿ ಕಾರ್ಯನಿರ್ವಹಿಸಿ ಕೇವಲ 10 ತಿಂಗಳ ಒಳಗಾಗಿ ಉಡುಪಿ ನಗರ ಠಾಣೆಗೆ ವರ್ಗಾವಣೆಗೊಂಡಿದ್ದ ಇವರು ಈಗ ಮತ್ತೆ ಉಡುಪಿಯಿಂದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರಕ್ಕೆ ವರ್ಗಾವಣೆಗೊಂಡಿದ್ದಾರೆ. ಖಡಕ್ ಅಧಿಕಾರಿಯಾಗಿ ಅಕ್ರಮ ಕಸಾಯಿಖಾನೆ ಮತ್ತು ಕಾಳದಂಧೆಕೋರರನ್ನು ಮಟ್ಟ ಹಾಕಿದ್ದ ಇವರು ಸ್ಥಳೀಯ ರಾಜಕಾರಣಿಗಳು ಮತ್ತು ಸ್ಥಾಪಿತ ಹಿತಾಸಕ್ತಿಗಳ ಕೆಂಗಣ್ಣಿಗೆ ಗುರಿಯಾಗಿ ಮತ್ತೆ ಮತ್ತೆ ವರ್ಗಾವಣೆಗೊಳ್ಳುವಂತಾಗಿದೆ ಎಂಬ ಕೂಗೂ ಕೇಳಿ ಬರುತ್ತಿದೆ.
ಕಾಪುವಿನಿಂದ ಉಡುಪಿ ನಗರ ಠಾಣೆಗೆ ವರ್ಗಾವಣೆಗೊಂಡಿದ್ದ ಎಸ್ಐ ನಿತ್ಯಾನಂದ ಗೌಡ ಅವರಿಗೆ ಉಡುಪಿಯಿಂದ ವರ್ಗಾವಣೆಗೊಂಡಿದ್ದ ಅನಂತ ಪದ್ಮನಾಭ ಕೆ.ವಿ ತಮ್ಮ ಸ್ಥಾನವನ್ನು ತೆರವುಗೊಳಿಸದ ಕಾರಣ, ಅಧಿಕಾರವಹಿಸಲು ಸಾಧ್ಯವಾಗದೆ, ಹುದ್ದೆಯಿಲ್ಲದೆ ಎಸ್ ಪಿ ಕಚೇರಿ ಸುಮ್ಮನೆ ಕಾಲ ಕಳೆಯುಂತಾಗಿತ್ತು. ಬಳಿಕ ನಿತ್ಯಾನಂದಗೌಡರನ್ನು ಸಿದ್ದಾಪುರಕ್ಕೆ ಕಳುಹಿಸಲಾಗಿತ್ತು.
ಈ ಮುಂಚೆ ಬಂಟ್ವಾಳ ಠಾಣೆಯಲ್ಲಿ ಸುಮಾರು ಮೂರು ತಿಂಗಳಿಗೂ ಹೆಚ್ಚು ಕಾಲ ಪ್ರೊಬೆಷನರಿ ಅವಧಿ ಮುಗಿಸಿ ನಂತರ ಬಂಟ್ವಾಳ ಠಾಣೆಯಲ್ಲೇ ಪೂರ್ಣವಧಿ ಠಾಣಾಧಿಕಾರಿಯಾಗಿ ನಿಯೋಜಿಸಲಾಗಿತ್ತು. ಇದೀಗ ಕಾಪುವಿನಲ್ಲಿ ಕಾರ್ಯನಿರ್ವಹಿಸಿದ ಹತ್ತು ತಿಂಗಳಲ್ಲಿ ಅವರನ್ನು ಉಡುಪಿಗೆ ವರ್ಗಾಯಿಸಿದ್ದು, ಇದೀಗ 20 ದಿನಗಳ ಒಳಗಾಗಿ ಮತ್ತೆ ಅಲ್ಲಿಂದ ಹೊರಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.