ತಿರುವನಂತಪುರ,ಸೆ 4 (MSP):ಮಲಯಾಳಂನ ಚಿತ್ರರಂಗದ ಶ್ರೇಷ್ಟ ನಟ ಮೋಹನ್ ಲಾಲ್ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಈ ಭೇಟಿಯ ಬಳಿಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇರಳದ ತಿರುವನಂತಪುರ ಕ್ಷೇತ್ರದಿಂದ ಮೋಹನ್ ಲಾಲ್ ಬಿಜೆಪಿಯಿಂದ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ನಟ ಮೋಹನ್ ಲಾಲ್ ತಮ್ಮ ವಿಶ್ವಶಾಂತಿ ಫೌಂಡೇಷನ್ನ ಕಾರ್ಯಕ್ರಮವೊಂದರ ಉದ್ಘಾಟನೆ ನೆರವೇರಿಸಲು ಮೋದಿಯನ್ನು ಆಹ್ವಾನಿಸಲು ಭೇಟಿಯಾಗಿದ್ದಾರೆ. ಆದ್ರೆ ಈ ಭೇಟಿ ಬೆನ್ನಲ್ಲೆ ಮೋಹನ್ ಲಾಲ್ ಬಿಜೆಪಿ ಸೇರಲಿದ್ದಾರೆ, ಅವರಿಗೆ ಲೋಕಸಭೆಯ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂಬ ಸುದ್ದಿಗಳು ಹರಿದಾಡತೊಡಗಿದೆ. ಮೋಹನ್ ಲಾಲ್ ತಮ್ಮ ತಂದೆ ವಿಶ್ವನಾಥ್ ನಾಯರ್ ಮತ್ತು ಶಾಂತಾ ಕುಮಾರಿ ಅವರ ಸ್ಮರಣಾರ್ಥ ವಿಶ್ವಶಾಂತಿ ಫೌಂಡೇಷನ್ನ ವತಿಯಿಂಡ ಕ್ಯಾನ್ಸರ್ ಚಿಕಿತ್ಸಾ ಸಂಸ್ಥೆ ನಿರ್ಮಿಸಿದ್ದಾರೆ.
ಕೇರಳದಲ್ಲಿ ಬಿಜೆಪಿ ತನ್ನ ನೆಲೆಯನ್ನು ಗಟ್ಟಿಮಾಡಿಕೊಳ್ಳಲು ಸ್ಟಾರ್ ಪವರ್ನ ಮೊರೆ ಹೋಗಿದೆ ಎನ್ನಲಾಗುತ್ತಿದ್ದು, ಮೋಹನ್ಲಾಲ್ ಅವರನ್ನು ತಿರುವನಂತಪುರಂನಿಂದ 2009, 2014 ರಲ್ಲಿ ಗೆದ್ದು ಬೀಗಿದ್ದ ಕಾಂಗ್ರೆಸ್ ಮುಖಂಡ ಶಶಿ ತರೂರ್ ವಿರುದ್ಧ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಸುದ್ದಿಯಾಗುತ್ತಿದೆ. ಅತ್ತ ಕಡೆ ಮೋಹನ್ ಲಾಲ್ರನ್ನು ಭೇಟಿಯಾದ ಬಗ್ಗೆ ಪ್ರಧಾನಿ ಮೋದಿ ಮಂಗಳವಾರ ಬೆಳಗ್ಗೆ ಟ್ವೀಟ್ ಮಾಡಿದ್ದು, ಮೋಹನ್ ಲಾಲ್ ಅವರ ಸಾಮಾಜಿಕ ಕಾರ್ಯ ಹಾಗೂ ಅವರ ನಮ್ರತೆಯ ಹೊಗಳಿ ಬರೆದಿದ್ದಾರೆ. ಇನ್ನು ಮೋಹನ್ ಲಾಲ್ ಕೂಡ ಪ್ರಧಾನಿ ಭೇಟಿ ಬಗ್ಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇತ್ತೀಚಿನ ಪ್ರವಾಹದಿಂದ ತತ್ತರಿಸಿರುವ ಕೇರಳವನ್ನು ಮರುನಿರ್ಮಿಸಲು ಗ್ಲೋಬಲ್ ಮಲೆಯಾಳಿ ರೌಂಡ್ ಟೇಬಲ್ನಲ್ಲಿ ಭಾಗವಹಿಸುವ ಬಗ್ಗೆ ಮೋದಿ ಭರವಸೆ ನೀಡಿದ್ದಾರೆ ಎಂದು ಮೋಹನ್ ಲಾಲ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.