ಸುರತ್ಕಲ್, ಸೆ 4 (MSP): ಎಂಆರ್ಪಿಎಲ್ ಯೋಜನಾ ವಿಸ್ತರಣೆಗೆ ಸಂಬಂಧಪಟ್ಟಂತೆ ಕುತ್ತೆತ್ತೂರು, ಪೆರ್ಮುದೆ, ಮತ್ತು ಇತರ ಗ್ರಾಮಗಳ ಕೃಷಿ ಭೂಮಿಯನ್ನು ಸ್ವಾಧೀನತೆ ಪಡೆದುಕೊಳ್ಳುವ ಪ್ರಕ್ರಿಯೆಯಲ್ಲಿ ಕೆಐಎಡಿಬಿ ಅಧಿಕಾರಿಗಳ ಅಕ್ರಮವನ್ನು ಪ್ರತಿಭಟಿಸಿ ವಿಶೇಷ ಭೂಸ್ವಾಧೀನಾಧಿಕಾರಿಯ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸಂತೃಸ್ಥ ಗ್ರಾಮಸ್ತರು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮುತ್ತಿಗೆ ಹಾಕಿ ಆಗ್ರಹಿಸಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರರು ಸ್ವಾಧೀನತೆಯ ಪ್ರಕ್ರಿಯೆಯಲ್ಲಿ ಮೇಲ್ನೋಟಕ್ಕೆ ಅಕ್ರಮ ಕಂಡು ಬಂದಿದ್ದು, ತನಿಖೆ ನಡೆಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೆ ಇಲ್ಲಿ ನಡೆದ ಅಕ್ರಮದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಂಬಂದಪಟ್ಟಂತಹ ದಾಖಲೆಗಳನ್ನು ಸಲ್ಲಿಸಿದ್ದರು ಇಲ್ಲಿಯವರೆಗೆ ಯಾವುದೇ ತನಿಖೆ ನಡೆದಿಲ್ಲ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದಾಗ ಅವರು ಕಾನೂನು ಪ್ರಕಾರ ತನಿಖೆ ನಡೆಸಿ ತಕ್ಷಣ ವರದಿ ಸಲ್ಲಿಸುವಂತೆ ಮೌಖಿಕ ಆದೇಶ ನೀಡಿದ್ದರು. ಆದರೆ ತನಿಖೆ ನಡೆಸುವಲ್ಲಿ ಜಿಲ್ಲಾಡಳಿತವು ನಿರಾಸಕ್ತಿ ಧೋರಣೆ ತಾಳಿದ್ದಾರೆ, ಈ ರೀತಿಯ ಕಾನೂನು ಬದ್ಧ ಹೋರಾಟಕ್ಕೂ ಮಾನ್ಯತೆ ಸಿಗದೇ ಇದ್ದರೆ ನಾವು ಯಾವ ರೀತಿ ಪ್ರತಿಭಟನೆಯನ್ನು ನಡೆಸಬೇಕು ಎಂದು ಸಚಿವರಿಗೆ ದೂರು ಸಲ್ಲಿಸಿದರು.
ಪೆರ್ಮುದೆ, ಕುತ್ತೆತ್ತೂರು, ಮತ್ತಿತರ ಗ್ರಾಮಗಳ ಭೂಮಿಯು ಮೂರು ಬೆಳೆ ಬೆಳೆಯುವಷ್ಟು ಫಲವತ್ತಾಗಿದ್ದರೂ ಅದನ್ನು ಒಣ ಭೂಮಿ ಎಂದು ಎಂಆರ್ಪಿಎಲ್ ಸಲ್ಲಿಸಿದ ಸುಳ್ಳು ಅರ್ಜಿಯನ್ನು ಒಪ್ಪಿಕೊಂಡು ರೈತರನ್ನು ವಂಚಿಸಲಾಗಿದೆ. ಇದು ಕೃಷಿಯೋಗ್ಯ ಭೂಮಿ ಎಂಬುದಕ್ಕೆ ಇಲ್ಲಿ ನಡೆಯುತ್ತಿದ್ದ ಕೃಷಿಯೇ ಸಾಕ್ಷಿಯಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆಯಬೇಕೆಂಬ ನಿಯಮವನ್ನು ಉಲ್ಲಂಘಿಸಲಾಗಿದೆ. ಇದಲ್ಲದೆ ರೈತರಿಗೆ ವಂಚಿಸಿದ ಜನಪ್ರತಿನಿಧಿಗಳಿಗೆ ರಾಜಿನಾಮೆ ಪಡೆಯಬೇಕು. ಇಲ್ಲವಾದಲ್ಲಿ ಉಪವಾಸ ಸತ್ಯಾಗ್ರಹವನ್ನು ಮಾಡಲಾಗುವುದು ಎಂದು ಪ್ರತಿಭಟನಾಕಾರರು ಆಗ್ರಹಿಸಿ ಸಚಿವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭ ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳಾದ ಮಧುಕರ ಅಮೀನ್, ವಿಲಿಯಂ ಡಿಸೋಜಾ, ಹೇಮಲತಾ ಎಸ್ ಭಟ್ ಮುಂತಾದವರಿದ್ದರು.