ಬಂಟ್ವಾಳ, ಸೆ 4(SM): ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶವೇನೋ ಪ್ರಕಟಗೊಂಡಿದೆ. ಬಂಟ್ವಾಳ ಪುರಸಭೆಯಲ್ಲಿ ಬಹುಮತ ಪಡೆಯದೆ ಕಾಂಗ್ರೆಸ್ ಅಧಿಕಾರವನ್ನು ಕಳೆದುಕೊಂಡಿದೆ. 27 ವಾರ್ಡ್ ಗಳ ಪೈಕಿ ಕೇವಲ 12 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್ ಯಾರೊಂದಿಗೂ ಮೈತ್ರಿ ನಡೆಸುವುದಿಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿಕೆ ನೀಡಿದ್ದು, ರೈ ಹೇಳಿಕೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಯಾರೂ ಏನೋ ಹೇಳಿದರೂ ಕೂಡ ಕಾಂಗ್ರೆಸ್ ಪಕ್ಷ ಯಾವುದೇ ಮತೀಯ ಸಂಘಟನೆಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಬಂಟ್ವಾಳ ಪುರಸಭೆಯಲ್ಲಿ ಈ ಹಿಂದೆ ಆಡಳಿತದಲ್ಲಿದ್ದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಅತ್ತ ಬಿಜೆಪಿ ಕೂಡ 11 ವಾರ್ಡ್ ಗಳಲ್ಲಿ ಮಾತ್ರವೇ ಗೆಲ್ಲುವ ಮೂಲಕ ಬಹುಮತ ಗಳಿಸುವಲ್ಲಿ ವಿಫಲಗೊಂಡಿದೆ.
ಕೆಲವೆಡೆ ಕಾಂಗ್ರೆಸ್ ಬಹುಮತ ಪಡೆದರೆ, ಮತ್ತೆ ಕೆಲವೆಡೆಗಳಲ್ಲಿ ಬಿಜೆಪಿ ಬಹುಮತವನ್ನು ಪಡೆದುಕೊಂಡಿದೆ. ಆದರೆ, ಬಂಟ್ವಾಳದ ಪುರಸಭೆ ಅತಂತ್ರಗೊಂಡಿದೆ. ಈ ಹಿಂದೆ ಬಂಟ್ವಾಳ ಪುರಸಭೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ೨೭ ವಾರ್ಡ್ ಗಳ ಪೈಕಿ ಕೇವಲ 12ರಲ್ಲಿ ಮಾತ್ರವೇ ಗೆಲುವನ್ನು ಸಾಧಿಸಿದೆ. ಆ ಮೂಲಕ ಬಹುಮತ ಪಡೆಯುವಲ್ಲಿ ಪಕ್ಷ ವಿಫಲಗೊಂಡಿದೆ. ಇನ್ನು ಕಳೆದ ಬಾರಿ 3 ಕ್ಷೇತ್ರಗಳನ್ನು ಗೆದ್ದುಕೊಂಡಿದ್ದ ಎಸ್ ಡಿಪಿಐ ಈ ಬಾರಿ 4 ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸಿದೆ. ಆ ಮೂಲಕ ಪುರಸಭೆ ಅತಂತ್ರಗೊಂಡಿದೆ. ಕಾಂಗ್ರೆಸ್ ಹಾಗೂ ಎಸ್ ಡಿಪಿ ಐ ಮೈತ್ರಿ ಮಾಡಿಕೊಂಡಲ್ಲಿ ಪುರಸಭೆಯಲ್ಲಿ ಮತ್ತೆ ಕಾಂಗ್ರೆಸ್ ಗದ್ದುಗೆಯನ್ನು ಪಡೆಯಬಹುದಾಗಿದೆ. ಆದರೆ, ಎಸ್ ಡಿಪಿಐ ಜತೆ ಮೈತ್ರಿ ಮಾಡುವುದಿಲ್ಲ ಎಂದು ಈಗಾಗಲೇ ರಮಾನಾಥ ರೈ ಹೇಳಿಕೆ ನೀಡಿದ ಪರಿಣಾಮ ಕಾಂಗ್ರೆಸ್ ಗೆ 12 ಸ್ಥಾನ ಗೆದ್ದ ಬಳಿಕವೂ ಅಧಿಕಾರ ಇಲ್ಲವೆಂಬಂತಾಗಿದೆ. ಇನ್ನು ಅತ್ತ ಬಿಜೆಪಿ ಕೂಡ ಎಸ್ ಡಿಪಿಐ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಆದರೆ, 11 ಸ್ಥಾನಗಳಲ್ಲಿ ಜಯಶಾಲಿಯಾಗಿರುವ ಬಿಜೆಪಿಗೆ ಶಾಸಕ ಹಾಗೂ ಸಂಸದರ ಬೆಂಬಲದ ಮೂಲಕ 13 ಸ್ಥಾನ ಪಡೆಯಬಹುದಾಗಿದ್ದು, ಈ ಮೂಲಕ ಪುರಸಭೆಯಲ್ಲಿ ಹೆಚ್ಚು ಸದಸ್ಯ ಬಲದ ಪಕ್ಷವಾಗಲಿದೆ. ಹೀಗಾದಲ್ಲಿ ಬಿಜೆಪಿ ಪುರಸಭೆಯ ಅಧಿಕಾರ ಗದ್ದುಗೆ ಹಿಡಿಯುವ ಸಾಧ್ಯತೆ ಹೆಚ್ಚಾಗಿದೆ.