ಮಂಗಳೂರು, ಸೆ 4(SM): ಮಂಗಳೂರಿನಲ್ಲಿ ಹಿಂದೂ ಜನಜಾಗೃತಿ ವತಿಯಿಂದ ಇಂದು ಸನಾತನ ಸಂಸ್ಥೆಯನ್ನು ನಿಷೇಧಿಸದಂತೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಜೆ ಎನ್ ಯು ವಿದ್ಯಾಲಯದ ವಿರುದ್ಧ ಘೋಷಣೆಗಳು ಕೇಳಿ ಬಂದವು. ಜೆ ಎನ್ ಯು ಸಂಸ್ಥೆ ಭಯೋತ್ಪಾದಕರನ್ನು ಹುಟ್ಟು ಹಾಕುತ್ತಿದೆ. ಅಲ್ಲಿ ವ್ಯಾಸಂಗ ಮಾಡಿ ಹೊರ ಬರುವ ವಿದ್ಯಾರ್ಥಿಗಳು ಭಯೋತ್ಪಾದಕರು ಎಂದು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡ ಹಿಂದೂ ಸಂಘಟನೆ ನಾಯಕಿ ಚೈತ್ರ ಕುಂದಾಪುರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಲ್ಲದೆ ದೇಶ ವಿರೋಧಿ ಚಟುವಟಿಕೆಗಳನ್ನು ಮಾಡುವವರನ್ನು ಈ ವಿದ್ಯಾಸಂಸ್ಥೆ ತಯಾರಿಸುತ್ತದೆ ಎಂದು ವಿವಾದದ ಬಾಂಬ್ ಸಿಡಿಸಿದ್ದಾರೆ.
ದೇವರ ಹುಂಡಿಗೆ ಕಾಣಿಕೆಯಾದ್ರೂ ನಾವು ಹೆಚ್ಚು ಹಾಕುತ್ತೇವೆ. ಆದರೆ ಈ ವಿದ್ಯಾಲಯದಲ್ಲಿ 11 ರೂಪಾಯಿಗೆ ವಿದ್ಯಾರ್ಜನೆ ಕೊಡುತ್ತಾರಂತೆ. ಯಾವ ರೀತಿಯ ವಿದ್ಯಾಭ್ಯಾಸ 11 ರೂಪಾಯಿಗೆ ಕೊಡುತ್ತಾರೋ ಗೊತ್ತಿಲ್ಲ ಎಂದು ಅವರು ಟೀಕಿಸಿದ್ದಾರೆ. ಹಿಂದೂ ಶಕ್ತಿಯನ್ನು ಸಹಿಸದೇ ಹಿಂದೂಗಳ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ. ಸನಾತನ ಸಂಸ್ಥೆಯನ್ನು ಆರೋಪಿಯೆಂದು ಹೇಳಿ ಸನಾತನದ ಆಶ್ರಮಗಳನ್ನು ತನಿಖೆ ಮಾಡಿದರೆ ಕೇವಲ ಸಂತರ ಸತ್ಸಂಗ ಸಿಗಬಹುದು ವಿನಃ ಆರೋಪಿಗಳಲ್ಲ. ಪ್ರಗತಿಪರರು ಹೆಣ ಬಿದ್ದರೂ ಕೂಡ ಸ್ವಾರ್ಥಪ್ರೇರಿತವಾದ ದುರುದ್ದೇಶದಿಂದ ರಸ್ತೆಗಿಳಿದು ಪ್ರತಿಭಟಿಸುತ್ತಾರೆ. ಅಷ್ಟೇ ಅಲ್ಲದೇ ತನಿಖಾ ವ್ಯವಸ್ತೆಯ ಮೇಲೆ ಒತ್ತಡ ನಿರ್ಮಾಣ ಮಾಡಿ ತನಿಖೆಯ ದಿಕ್ಕನ್ನು ಬದಲಾಯಿಸುತ್ತಿದ್ದಾರೆ. ಆದರೆ ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ಇದೇ ಪ್ರಗತಿಪರರು ಧ್ವನಿಯೆತ್ತುವುದಿಲ್ಲ ಎಂದು ಗುಡುಗಿದರು.
ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕ ಗುರುಪ್ರಸಾದ ಗೌಡ ಮಾತನಾಡಿ, ‘ವಿಚಾರವಾದಿಗಳ ಹತ್ಯೆಯನ್ನು ಸನಾತನ ಸಂಸ್ಥೆಯ ಮೇಲೆ ಹೊರಿಸಿ ಅಪಪ್ರಚಾರ ಮಾಡುವ ಮೂಲಕ ಹಿಂದೂ ದ್ವೇಷವನ್ನು ಪ್ರಕಟಿಸುವ ವ್ಯವಸ್ಥಿತ ಷಡ್ಯಂತ್ರ್ಯವನ್ನು ಕೆಲವು ರಾಜಕೀಯ ಶಕ್ತಿಗಳು, ವಿಚಾರವಾದಿ ಸಂಘಟನೆಯವರು ಮಾಡುತ್ತಿದ್ದಾರೆ. ಸನಾತನ ಸಂಸ್ಥೆಯು ಆಧ್ಯಾತ್ಮ ಮತ್ತು ಹಿಂದುತ್ವದ ಕ್ಷೇತ್ರದಲ್ಲಿ ಶ್ರೇಷ್ಠವಾದ ಕಾರ್ಯವನ್ನು ಮಾಡುತ್ತಿರುವುದರಿಂದಲೇ ಹಿಂದೂ ವಿರೋಧಿ ಶಕ್ತಿಗಳ ಕೆಂಗಣ್ಣಿಗೆ ಸಂಸ್ಥೆಯ ಕಾರ್ಯವು ಗುರಿಯಾಗಿದೆ. ಸಂಸ್ಥೆಯ ಮಾನಹಾನಿಯನ್ನು ಮಾಡಲು ವ್ಯವಸ್ಥಿತ ಸಂಚು ಹಿಂದೂ ವಿರೋಧಿಗಳು ರೂಪಿಸುತ್ತಿದ್ದಾರೆ. ತನಿಖಾ ಸಂಸ್ಥೆಗಳೂ ಕೂಡ ಈ ಹತ್ಯೆಯ ಹಿಂದೆ ಯಾವುದೇ ಸಂಘಟನೆಯ ಕೈವಾಡ ಇಲ್ಲ’ ಎಂದು ಹೇಳಿದ್ದರು.
ಇನ್ನು ಪ್ರತಿಭಟನೆಯಲ್ಲಿ ಪಾಲ್ಗೊಂಡ ಹಲವಾರು ಮುಖಂಡರು ಕೂಡಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಇನ್ನು ಪ್ರತಿಭಟನೆಗೂ ಮುನ್ನ ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಯಿತು.