ಮಂಗಳೂರು, ಸೆ, 5(MSP): ಮಂಗಳೂರು ವಿಶ್ವವಿದ್ಯಾಲಯದಲ್ಲಿ ದುಷ್ಕರ್ಮಿಗಳು ವಿದ್ಯಾರ್ಥಿನಿಯರೊಂದಿಗೆ ಅಶ್ಲೀಲವಾಗಿ ವರ್ತಿಸಿದ ವಿರುದ್ದ ಬೃಹತ್ ಪ್ರತಿಭಟನೆಯ ಸಂದರ್ಭ ನೀಡಿದ ಭರವಸೆಯಂತೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯಾಗಲಿ , ಪೊಲೀಸರಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಂಗಳೂರು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಅಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅಭಾವಿಪದ ಜಿಲ್ಲಾ ಸಂಚಾಲಕ ಸುಧಿತ್ ಶೆಟ್ಟಿ, ವಿಶ್ವವಿದ್ಯಾಲಯದಲ್ಲಿ ದುಷ್ಕರ್ಮಿಗಳು ವಿದ್ಯಾರ್ಥಿನಿಯರೊಂದಿಗೆ ಅಶ್ಲೀಲವಾಗಿ ವರ್ತಿಸಿದ ಘಟನೆ ವಿರುದ್ದ ಆ. 20 ರಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಗಿತ್ತು. ಈ ಸಂದರ್ಭ ಕುಲಪತಿಗಳು, ಕುಲಸಚಿವರು, ವಿಶೇಷ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿನಿಯರಿಗೆ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದ್ದರು, ಆದರೆ ವಿಶ್ವವಿದ್ಯಾಲಯ ಇಲ್ಲಿತನಕ ಪೊಲೀಸ್ ಠಾಣೆಯಲ್ಲಿ ಯಾವುದೇ ಲಿಖಿತ ದೂರನ್ನು ದಾಖಲಿಸಿಲ್ಲ. ವಿದ್ಯಾರ್ಥಿಗಳ ರಕ್ಷಣೆ ಮತ್ತು ಭದ್ರತೆಗೆ ಒತ್ತು ನೀಡಬೇಕಾಗಿದ್ದ ವಿ.ವಿ ಆಡಳಿತ ಮಂಡಳಿ ಕಾಟಾಚಾರಕ್ಕೆ ಮಾತ್ರ ಪೊಲೀಸ್ ಇಲಾಖೆಗೆ ಒಪ್ಪಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಾಸ್ಟೆಲ್ ವಾರ್ಡನ್ ಗಳು ವಿದ್ಯಾರ್ಥಿನಿಯರಿಗೆ, ಯಾವುದೇ ದೂರನ್ನು ಪೊಲೀಸರಿಗೆ ನೀಡುವಂತಿಲ್ಲ ಎಂಬ ಬೆದರಿಕೆ ಹಾಕುತ್ತಿದ್ದು, ಇದರಿಂದ ವಿದ್ಯಾರ್ಥಿನಿಯರು ಪ್ರತ್ಯೇಕವಾಗಿ ಪೊಲೀಸರಿಗೆ ದೂರನ್ನು ನೀಡಲು ಹಿಂಜರಿಯುತ್ತಿದ್ದಾರೆ ಎಂದು ಇದೇ ವೇಳೆ ತಿಳಿಸಿದರು. ವಿಶ್ವವಿದ್ಯಾಲಯದಲ್ಲಿ ಆವರಣದಲ್ಲಿ ಕೋಟ್ಯಾಂತರ ರೂ ಗಳನ್ನು ಖರ್ಚುಮಾಡಿ ವಿಶ್ವವಿದ್ಯಾಲಯದ ಎಲ್ಲಾ ಮೂಲೆ ಮೂಲೆಯಲ್ಲಿ ಸಿಸಿ ಕ್ಯಾಮಾರಾಗಳನ್ನು ಅಳವಡಿಸಿದ್ದಾರೆ. ಆದರೆ ಹೆಚ್ಚಿನ ಕ್ಯಾಮಾರಗಳ ಕೆಲಸವೇ ಮಾಡುತ್ತಿಲ್ಲ ಎಂದು ದೂರಿದರು. ಪತ್ರಿಕಾಗೋಷ್ಟಿಯಲ್ಲಿ ಎಬಿವಿಪಿಯ ರಕ್ಷಿತ್ ಹಾಗೂ ಮಹೇಶ್ ಉಪಸ್ಥಿತರಿದ್ದರು.