ಮಂಗಳೂರು, ಸೆ 5 (MSP): ಭಾರೀ ಮಳೆ ಹಾಗೂ ಸತತ ಗುಡ್ಡಕುಸಿತದಿಂದಾಗಿ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು, ಶಿರಾಡಿ ಘಾಟ್ ಬುಧವಾರದಿಂದ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂದೂರಿ ಪ್ರಕಟಣೆ ಹೊರಡಿಸಿದ್ದಾರೆ. ಈ ರಸ್ತೆಯಲ್ಲಿ ಲಘ ವಾಹನಗಳ ಓಡಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಅನಾಹುತ ಸಂಭವಿಸಿದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೇ ಹೊಣೆಯಾಗಲಿದ್ದರೆ ಈ ಕುರಿತು ಹಾಸನದಲ್ಲಿ ನಡೆದ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ಪಷ್ಟನೆ ನೀಡಿದ್ದಾರೆ. ತಜ್ಞರ ಸೂಚನೆ ಮೇರೆಗೆ ಲಘು ವಾಹನ ಸಂಚರಿಸಬಹುದೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪತ್ರ ನೀಡಿರುವ ಹಿನ್ನಲೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಆದರೆ ಇದಕ್ಕೆ ತದ್ವಿರುದ್ದ ಹೇಳಿಕೆ ನೀಡಿದ ಸಸಿಕಾಂತ್ ಸೆಂಥಿಲ್ ಶಿರಾಡಿ ಘಾಟ್ ನಲ್ಲಿ ಯಾವುದೇ ವಾಹನಗಳಿಗೆ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಸೆ. 5 ರಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ ಎಂದು ಹೇಳಿದ್ದಾರೆ. ಶಿರಾಡಿಘಾಟ್ನಲ್ಲಿ ಸಂಚಾರಕ್ಕೆ ಅವಕಾಶ ನೀಡುವ ಮೊದಲು ಸಕಲೇಶಪುರ ಹಾಗೂ ಪುತ್ತೂರು ಸಹಾಯಕ ಆಯುಕ್ತರು ಜಂಟಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲಿದ್ದಾರೆ. ಆ ಬಳಿಕವಷ್ಟೇ ಸಂಚಾರಕ್ಕೆ ಅವಕಾಶ ಕಲ್ಪಿಸುವ ಆದೇಶ ಹೊರಡಿಸಲಾಗುವುದು ಎಂದು ಹೇಳಿದ್ದಾರೆ.
ಈ ಎರಡು ಜಿಲ್ಲಾಧಿಕಾರಿಗಳ ವ್ಯತಿರಿಕ್ತ ಹೇಳಿಕೆಯಿಂದ ವಾಹನ ಸವಾರರು ಗೊಂದಲಕ್ಕೀಡಾಗಿದ್ದಾರೆ. ಶಿರಾಡಿ ಘಾಟಿ ನಲ್ಲಿ ಇಂದಿನಿಂದ ಸಂಚಾರಕ್ಕೆ ಮುಕ್ತವಾಗಿದೆ ಎಂದು ವಾಹನ ಸವಾರರು ಬೆಳಗ್ಗಿನಿಂದಲೇ ಗುಂಡ್ಯ ಗೇಟ್ ಬಳಿ ಕಾದಿದ್ದಾರೆ. ಅದರೆ ಲಘು ವಾಹನಗಳ ಸಹಿತ ಯಾವುದೇ ವಾಹನಕ್ಕೆ ಸಂಚಾರಕ್ಕೆ ಅನುವು ಮಾಡಿಕೊಡದೆ ಹಿನ್ನಲೆಯಲ್ಲಿ ಮಲೆನಾಡು ಹಿತರಕ್ಷಣಾ ಸಮಿತಿ ಹಾಗೂ ವಾಹನ ಸವಾರರ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗೆ ಮಣಿದ ಅಧಿಕಾರಿಗಳು ಕೇವಲ ಅಲ್ಲಿದ್ದ ವಾಹನಗಳನ್ನು ಮಾತ್ರ ತೆರಳುವಂತೆ ಸೂಚಿಸಿ ಬಳಿಕ ಮತ್ತೆ ನಿಷೇಧ ಮುಂದುವರಿಸಿದ್ದಾರೆ.