ಹೆಜಮಾಡಿ, ಸೆ 5(MSP): ಹೆಜಮಾಡಿಯ ಅಮಾಸೆಕರಿಯ ಸಮುದ್ರ ದಡದಲ್ಲಿ ಮೀನುಗಳ ಸುಗ್ಗಿ. ತಾ ಮುಂದು ನಾ ಮುಂದು ಪೈಪೋಟಿಯಲ್ಲಿ ಮೀನು ಹೆಕ್ಕಲು ಜನರು ಮುಗಿಬಿದ್ದಿದ್ದರು. ಅಪಾರ ಪ್ರಮಾಣ ದಲ್ಲಿ ಮೀನುಗಳು ನೀರಿನಿಂದ ಮೇಲಕ್ಕೆ ಬಂದು ಬೀಳುತ್ತಿದ್ದು ಸ್ಥಳೀಯರು ಗೋಣಿ ಚೀಲಗಳಲ್ಲಿ ತುಂಬಿಸಿ ವಾಹನಗಳಲ್ಲಿ ಕೊಂಡೊಯ್ದರು ! ಅಮಾಸೆಕರಿಯ ಜನರಿಗಂತು ಹಬ್ಬದ ವಾತಾವರಣ. ರಸ್ತೆಯಲ್ಲಿ ಹಾದು ಹೋಗುವವರ ಕೈಯಲ್ಲಿ ಚೀಲ ತುಂಬಾ ಮೀನು. ವಿಷಯ ತಿಳಿದ ಪಕ್ಕದ ಊರುಗಳಿಂದಲೂ ವಾಹನದಲ್ಲಿ ಬಂದು ಮೀನು ಕೊಂಡು ಹೋಗಿದ್ದಾರೆ. ಕಡಲ ಬದಿಯಲ್ಲಿ ಬಲು ಅಪರೂಪದ ಸನ್ನಿವೇಷ ಕಾಣಸಿಕ್ಕಿದ್ದು ಸೆ.5ರ ಬುಧವಾರ. ಮಕ್ಕಳಿಂದ ಹಿಡಿದು ಮುದುಕರೂ ಸಮುದ್ರ ತೀರದಲ್ಲಿ ಮೀನು ಹೆಕ್ಕುತಿರುವ ದೃಶ್ಯ ಸಾಮಾನ್ಯವಾಗಿತ್ತು. ಅದರಲ್ಲೂ ಹೆಂಗಸರು ಮೀನು ಹೆಕ್ಕುವಲ್ಲಿ ಎತ್ತಿದ ಕೈ. ಇಲ್ಲಿನ ಸ್ಥಳೀಯರು ಹೇಳುವ ಪ್ರಕಾರ ಈ ರೀತಿ ಮೀನು ಸಿಗುವುದು ಬಲು ಅಪರೂಪ.
ಕೈ ರಂಪಣಿ ಬಲೆಯವರು ಮೀನಿಗಾಗಿ ಹಾಕಿದ ಬಲೆಗೆ ಸಿಲ್ವರ್ ಫಿಷ್ (ಬೊಳೆಂಜೀರ್) ತುಂಬಿದ್ದರಿಂದ ಬಲೆ ಎಳೆಯಲು ಕಷ್ಟವಾಗಿ ದಡಕ್ಕೆ ಬಂದು ಬಲೆಯನ್ನು ಎಳೆಯಲು ಪ್ರಯತ್ನಿಸುತಿದ್ದರು. ಬಲೆಯಲ್ಲಿ ಮೀನು ತುಂಬಿ ತುಳುಕಿದ್ದು, ಅತಿಯಾದ ಮೀನುಗಳು ಸಮುದ್ರ ದಡದಲ್ಲಿ ಎಲ್ಲರ ಕೈಗೆ ಸಿಗುವಂತೆ ಒದ್ದಾಡುವ ದೃಶ್ಯ ಸಾಮಾನ್ಯವಾಗಿತ್ತು. ಸಮುದ್ರ ತೀರದಲ್ಲಿ ಈ ದೃಶ್ಯ ನೋಡಲು ಜನಸಾಗರವೇ ಇದ್ದರೂ ಎಲ್ಲರ ಚಿತ್ತ ಮೀನು ಹಿಡಿಯುವಲ್ಲೇ ಇತ್ತು.