ಸುಳ್ಯ, ಅ 4 :ರಾಜ್ಯದ ಕಾಂಗ್ರೆಸ್ ಸರಕಾರ ಗ್ರಾಮ ಗ್ರಾಮಗಳಲ್ಲಿ ಮದ್ಯದಂಗಡಿಗಳನ್ನು ತರೆಯುವ ಮೂಲಕ ಅಲ್ಲಿನ ಬಡ ಮುಗ್ಧ ಜನರನ್ನು ಬೀದಿಗೆ ತಳ್ಳುವ ಕೆಲಸ ಮಾಡುತ್ತಿದೆ. ಈ ಮೂಲಕ ಆದಾಯ ಗಳಿಸುವ ತಂತ್ರವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಶಾಸಕ ಎಸ್. ಅಂಗಾರ ಹೇಳಿದರು.
ಅವರು ಇಂದು ಸುಳ್ಯ ತಾಲೂಕಿನ ದುಗ್ಗಲಡ್ಕದ ಪರಿಸರದಲ್ಲಿ ಅನಧಿಕೃತವಾಗಿ ಆರಂಭಗೊಂಡಿರುವ ಮದ್ಯದಂಗಡಿ ವಿರುದ್ದ ನಾಗರಿಕ ಹಿತರಕ್ಷಣಾ ವೇದಿಕೆ ಮೂಲಕ ಪರಿಸರದ ಎಲ್ಲಾ ಸಂಘಸಂಸ್ಥೆಗಳ ಸಹಯೋಗದಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ ನಾವು ಯಾವತ್ತು ಮದ್ಯದಂಗಡಿ ಪರ ಅಲ್ಲ. ಇಡೀ ಸಮಾಜವನ್ನು ಮದ್ಯಮುಕ್ತ ಮಾಡಬೇಕು. ಸರಕಾರ ನಾಟಕ ಮಾಡುವುದನ್ನು ಬಿಟ್ಟು ಗ್ರಾಮೀಣ ಭಾಗದ ಜನರ ಕಷ್ಟ ಕಾರ್ಪಣ್ಯಗಳನ್ನು ಅರ್ಥಮಾಡಿಕೊಳ್ಳದೇ ಸರಕಾರದ ಕಾನೂನುಗಳನ್ನು ಗಾಳಿ ತೂರುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ಕುಮಾರ್ ಮೇನಾಲ ಮಾತನಾಡಿ ಸರಕಾರ ಮದ್ಯದಂಗಡಿಗಳನ್ನು ತೆರೆಯುವ ಮೂಲಕ ನಾಗರಿಕರನ್ನು ಬೀದಿಗೆ ತಳ್ಳುವ ಕೆಲಸ ಮಾಡುತ್ತಿದೆ. ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ಗಳನ್ನು ಮದ್ಯಮುಕ್ತ ಸಮಾಜವನ್ನಾಗಿ ಘೋಷಣೆ ಮಾಡಬೇಕು. ರಾಜಕೀಯ ಪಕ್ಷಗಳು ಮುಂದಿನ ಚುನಾವಣೆ ಪ್ರಣಾಳಿಕೆಯಲ್ಲಿ ಮದ್ಯಮುಕ್ತ ರಾಜ್ಯವನ್ನಾಗಿ ಘೋಷಣೆಯನ್ನು ಪ್ರಣಾಳಿಕೆಯಲ್ಲಿ ಸೇರಿಸಬೇಕು. ಅಂತವರಿಗೆ ಜನಜಾಗೃತಿ ವೇದಿಕೆ ಬೆಂಬಲ ನೀಡಲಿದೆ. ಇಲ್ಲದಿದ್ದರೆ ಸುಮಾರು 1.50 ಲಕ್ಷ ಕಾರ್ಯಕರ್ತರು ಜನಜಾಗೃತಿಯಲ್ಲಿದ್ದಾರೆ. ಇದಕ್ಕಾಗಿ ಮುಂದೆ ಬರುವ ಸರಕಾರಗಳು ಪಾನ ನಿಷೇಧ ರಾಜ್ಯವನ್ನಾಗಿ ಮಾಡಲು ಬದ್ದರಾಗಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾಧವ ಗೌಡ, ಜಿ.ಪಂ ಸದಸ್ಯ ಹರೀಶ್ ಕಂಜಿಪಿಲಿ, ನಗರ ಪಂಚಾಯತ್ ಸದಸ್ಯರಾದ ಎನ್.ಎ.ರಾಮಚಂದ್ರ, ಪ್ರಕಾಶ್ ಹೆಗ್ಡೆ, ಮೀನಾಕ್ಷಿ, ಕಿರಣ್ ಕುರುಂಜಿ, ಹರಿಣಕ್ಷಿ ನಾರಾಯಣ, ಮೋಹಿನಿ ನಾಗರಾಜ್, ಜಾನಕಿ ನಾರಾಯಣ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ವಿನಯ ಕುಮಾರ್ ಕಂದಡ್ಕ, ಕಿಶೋರ್ ಕುಮಾರ್ ಶೀರಾಡಿ, ಬೂಡು ರಾಧಾಕೃಷ್ಣ ರೈ, ಸ್ಥಳಿಯ ಮುಖಂಡರಾದ ಯತೀಶ್ ರೈ ದುಗ್ಗಲಡ್ಕ, ಸುಂದರ್ ರಾವ್, ದಿನೇಶ್ ಮಣಿಯಾಣಿ, ಮಾಧವ ಗೌಡ, ಸೀತಾನಂದ ಬೇರ್ಪಡ್ಕ, ಗಣೇಶ್ ಭಟ್, ಮಾಧವ ಚಾಂತಾಳ, ನಾರಾಯಣ ನಾಯ್ಕ ದುಗ್ಗಲಡ್ಕ, ಹೇಮಂತ್ ಕಂದಡ್ಕ, ಹಸೈನಾರ್ ದುಗ್ಗಲಡ್ಕ ಮೊದಲಾದವರು ಭಾಗವಹಿಸಿದ್ದರು.