ಮಂಗಳೂರು, ಸೆ 5(SM): ನಿರಂತರ ಮಳೆ ಸುರಿದ ಪರಿಣಾಮ ಗುಡ್ಡ ಕುಸಿತದಿಂದಾಗಿ ಬಂದ್ ಆಗಿದ್ದ ಶಿರಾಡಿ ಘಾಟಿ ರಸ್ತೆಯಲ್ಲಿ ಲಘು ವಾಹನಗಳ ಸಂಚಾರಕ್ಕೆ ತಕ್ಷಣದಿಂದಲೇ ಅವಕಾಶ ನೀಡಿ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ. ಇತ್ತೀಚೆಗೆ ಶಿರಾಡಿ ಘಾಟಿ ರಸ್ತೆಯಲ್ಲಿ ನಿರಂತರ ಭೂಕುಸಿತದಿಂದಾಗಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಶಿರಾಡಿ ಸಂಚಾರಕ್ಕೆ ಮುಕ್ತಗೊಂಡು ಕೆಲವೇ ದಿನಗಳಲ್ಲಿ ಮತ್ತೆ ಬಂದ್ ಆಗಿತ್ತು. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಶಿರಾಡಿಘಾಟ್ ರಸ್ತೆಯನ್ನು ತಕ್ಷಣ ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದರು. ಪ್ರಸಕ್ತ ಭೂ ಕುಸಿತ ಸ್ಥಳಗಳನ್ನು ದುರಸ್ತಿ ಮಾಡಲಾಗಿದ್ದು, ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಹುದು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ವರದಿ ನೀಡಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗಳು ಸ್ಥಳ ತನಿಖೆ ನಡೆಸಿ, ವರದಿ ನೀಡಲು ರಾಷ್ಟ್ರೀಯ ಹೆದ್ದಾರಿ ಕಾರ್ಯಕಾರಿ ಅಭಿಯಂತರರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಹಾಗೂ ಪುತ್ತೂರು ಉಪವಿಭಾಗಾಧಿಕಾರಿಗಳ ತಂಡ ನೇಮಿಸಿದ್ದರು. ಈ ತಂಡವು ನೀಡಿದ ವರದಿಯಂತೆ ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು, ಶಿರಾಡಿ ಘಾಟಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶವನ್ನು ಕಲ್ಪಿಸಿದ್ದಾರೆ.
ಇನ್ನು ಕೆಲವು ಸ್ಥಳಗಳಲ್ಲಿ ಭೂಕುಸಿತ ಹಾಗೂ ರಸ್ತೆಯ ಪಕ್ಕದಲ್ಲಿ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ ಹಾಗೂ ಅಗತ್ಯ ಸ್ಥಳಗಳಲ್ಲಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಕಾರು, ಜೀಪು, ದ್ವಿಚಕ್ರ ವಾಹನಗಳು, ಟೆಂಪೋ ಟ್ರಾವೆಲರ್, ಮ್ಯಾಕ್ಸಿಕ್ಯಾಬ್ ವಾಹನಗಳ ಸಂಚಾರಕ್ಕೆ ಅನುವು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟನೆ ತಿಳಿಸಿದೆ.
ಆದರೆ, ಶಿರಾಡಿ ಘಾಟಿ ರಸ್ತೆ ಇನ್ನೂ ಸಂಪೂರ್ಣ ಯಥಾಸ್ಥಿಗೆ ಬಾರದಿರುವುದರಿಂದ ಎಲ್ಲಾ ಬಸ್ಸುಗಳು, ಲಾರಿ, ಟ್ಯಾಂಕರ್, ಕಂಟೈನರ್ ಗಳು ಸೇರಿದಂತೆ ಭಾರೀ ವಾಹನಗಳ ಸಂಚಾರವನ್ನು ಮುಂದಿನ ಆದೇಶದವರೆಗೆ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.