ಸುರತ್ಕಲ್, ಸೆ 5(SM): ಬೀಚ್ ಗೆ ತೆರಳುವ ಸಂದರ್ಭ ಚಿನ್ನಾಭರಣ ಒಳಗೊಂಡಿದ್ದ ಹ್ಯಾಂಡ್ ಬ್ಯಾಗ್ ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುರತ್ಕಲ್ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕುದ್ರೋಳಿಯ ಸಿಪಿಸಿ ಕಂಪೌಂಡ್ ನಿವಾಸಿ ಮಹಮ್ಮದ್ ಸಲ್ಮಾನ್(26) ಹಾಗೂ ಬಿ.ಸಿ.ರೋಡು ಕೈಕಂಬ ನಿವಾಸಿ ಮಹಮ್ಮದ್ ಹುಸೈನ್ ತನ್ವೀರ್(28) ಬಂಧಿತ ಆರೋಪಿಗಳು. ಇವರನ್ನು ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಿಂದ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಕಳವುಗೈದಿದ್ದ ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, 1 ಕಾರು ಹಾಗೂ ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಒಟ್ಟು ಸುಮಾರು 11.50 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆಗಸ್ಟ್ 26ರಂದು ಮುಕ್ಕ ಮಲ್ಲಮಾರ್ ಬೀಚ್ ಗೆ ಸುರತ್ಕಲ್ ನ ಒಂದು ಕುಟುಂಬದ ನಿವಾಸಿಗಳು ತೆರಳಿದ್ದರು. ಈ ಸಂದರ್ಭ ಮಹಿಳೆಯೊಬ್ಬರು ಧರಿಸಿದ್ದ ಚಿನ್ನಾಭರಣಗಳನ್ನು ಕಳಚಿ ಹ್ಯಾಂಡ್ ಬ್ಯಾಗ್ ನಲ್ಲಿರಿಸಿದ್ದಾರೆ. ಇದನ್ನು ಗಮನಿಸಿದ ಆರೋಪಿಗಳು ಸ್ಥಳಕ್ಕೆ ತೆರಳಿ ಮಹಿಳೆಯ ಕೈಯಿಂದ ಹ್ಯಾಂಡ್ ಬ್ಯಾಗ್ ದರೋಡೆಗೈದಿದ್ದಾರೆ. ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ಬಗ್ಗೆ ಸುರತ್ಕಲ್ ಠಾಣಾ ಪೊಲೀಸರಿಗೆ ದೂರು ನೀಡಲಾಗಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರು ಶೋಧ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ರಾಜೇಂದ್ರ.ಡಿ.ಎಸ್ ಮಾರ್ಗದರ್ಶನದಲ್ಲಿ, ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ರಾಮಕೃಷ್ಣ ಕೆ.ಜಿ ಹಾಗೂ ಠಾಣಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.