ಬೆಂಗಳೂರು, ಸೆ 5(SM): ಮೈತ್ರಿ ಸರ್ಕಾರವನ್ನು ಮುಗಿಸಲು ಬಿಜೆಪಿ ಸಂಚು ಹೂಡಿದ್ದು, ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ಐಟಿ ಮುಖ್ಯಸ್ಥ ಬಾಲಕೃಷ್ಣ ಅವರನ್ನು ಭೇಟಿಯಾಗಿದ್ದಾರೆ' ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಧ್ಯಕ್ಷ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಗಳ ಆರೋಪದ ವಿರುದ್ದ ಕಿಡಿ ಕಾರಿದ್ದಾರೆ. 'ಜವಾಬ್ದಾರಿ ಅರಿತು ಮುಖ್ಯಮಂತ್ರಿಗಳು ಹೇಳಿಕೆ ನೀಡಬೇಕು. ಯಾವ ಐಟಿ, ಯಾವ ಇಡಿ? ನಮಗೂ ಅದಕ್ಕೂ ಯಾವ ಸಂಬಂಧ' ಎಂದು ಪ್ರಶ್ನಿಸಿದ ಅವರು ಮುಖ್ಯಮಂತ್ರಿಗಳ ಹೇಳಿಕೆ ಜನರಲ್ಲಿ ಗೊಂದಲವನ್ನುಂಟು ಮಾಡಿದೆ ಎಂದಿದ್ದಾರೆ. ಇನ್ನು ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿ.ವೈ.ವಿಜಯೇಂದ್ರ ಅವರು, ‘ಸಿಎಂ ಮಾಡಿರುವ ಆರೋಪ ಅವರ ಸ್ಥಾನಕ್ಕೆ ಗೌರವ ತರುವುದಿಲ್ಲ’ ಎಂದಿದ್ದಾರೆ.