ಮಂಗಳೂರು, ಸೆ 6 (MSP): ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎನ್ನುವುದಕ್ಕೆ ನಿಜವಾದ ಉದಾಹರಣೆ ಬಸವರಾಜ ಬಿಸರಳ್ಳಿ. ಇವರ ವಯಸ್ಸು ಕೇಳಿದ್ರೆ ಯಾರಾದ್ರೂ ದಂಗಾಗಬಹುದು. ಕೊಪ್ಪಳ ತಾಲೂಕಿನ ಬಿಸರಳ್ಳಿಯವರಾದವಾರಾದ ಇವರ ವಯಸ್ಸು ಬರೋಬ್ಬರಿ 91 ವರ್ಷ. ವಯಸ್ಸಿನ ನೆಪವನ್ನು ದೂರ ತಳ್ಳಿ ತಮ್ಮ ಇಳಿ ವಯಸ್ಸಿನಲ್ಲಿಯೂ ಪಿಎಚ್ಡಿ ಪದವಿ ಪಡೆಯಬೇಕೆಂಬ ಆಸೆಯಿಂದ ಬಳ್ಳಾರಿಯ ಹಂಪಿ ವಿವಿಯಲ್ಲಿ ಸೆ.3 ಮಂಗಳವಾರ ಪರೀಕ್ಷೆ ಬರೆದಿದ್ದಾರೆ. ಅಧಮ್ಯ ಉತ್ಸಾಹದ ಜೀವ ಸೆಲೆಯಂತಿರುವ ಬಸವರಾಜ ಬಿಸರಳ್ಳಿ ಅವರಿಗೆ ಮಂಗಳೂರಿನ ನಂಟು ಕೂಡಾ ಇದೆ.
ಕವಲೂರು ಶಾಲೆಯ ಅದ್ಯಾಪಕರಾಗಿ ವೃತ್ತಿ ಆರಂಭಿಸಿ, ರಾಜ್ಯದ ನಾನಾ ಕಡೆ ಕರ್ತವ್ಯ ನಿರ್ವಹಿಸಿದ್ದಾರೆ. ಮಂಗಳೂರಿನಲ್ಲಿಯೂ ಸೇವೆ ಸಲ್ಲಿದ ಇವರು 1992ರಲ್ಲಿ ಮಂಗಳೂರು ಶಾಲೆಯಲ್ಲಿಯೇ ನಿವೃತ್ತಿಯಾಗಿದ್ದರು. ಆದರೆ ನಿವೃತ್ತಿ ಬಳಿಕವಾದರೂ ಪಿಎಚ್ಡಿ ಪಡೆಯಬೇಕೆನ್ನುವ ಆಸೆ ಅವರನ್ನು ಸದಾ ಕಾಡುತ್ತಿತ್ತು. ಅದಕ್ಕೆ ಅವರ ಪ್ರಯತ್ನ ನಿರಂತರವಾಗಿತ್ತು.
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಇವರು ನಿವೃತ್ತಿ ನಂತರ ಪದವಿ ಪಡೆಯಬೇಕೆನ್ನುವ ಆಸೆಗೆ ವಿಧ ಕಾರಣಗಳು ಅಡೆತಡೆಯಾಗಿತ್ತು. ಈ ಹಿಂದೆ ಅವರು ಕರ್ನಾಟಕ ವಿವಿಯಲ್ಲಿ ಎಂಎ ಪದವಿ ಪಡೆದಿದ್ದರು. ಆದರೆ ಪಿಎಚ್ಡಿ ಮಾಡುವ ಅರ್ಹತೆಗೆ ಅಗತ್ಯವಿದ್ದ ಶೇ.55ರಷ್ಟು ಅಂಕ ಬಂದಿರಲಿಲ್ಲ. ಅದರೂ ಎದೆಗುಂದದ ಹಿರಿಯ ಚೇತನಾ ಮತ್ತೊಮ್ಮೆ ಪರೀಕ್ಷೆ ಎದುರಿಸಿ ಹಂಪಿ ವಿವಿಯಲ್ಲಿ ಎಂಎ ಪದವಿ ಪಡೆದಿದ್ದರು. ಅಚ್ಚರಿ ಎಂದರೆ ಇವರಿಗೆ ಶೇ.66 ಅಂಕ ಲಭಿಸಿತ್ತು. ಕೊನೆಗೂ ಅವರ ಆಸೆಯಂತೆ ಈ ವರ್ಷ ಪಿಎಚ್ಡಿಯಲ್ಲಿ ವಚನ ಸಾಹಿತ್ಯ ಅಧ್ಯಯನದ ವಿಭಾಗಕ್ಕಾಗಿ ಪರೀಕ್ಷೆ ಬರೆದಿದ್ದಾರೆ. ಶಿಕ್ಷಣದ ಬಗ್ಗೆ ಅಪಾರ ಒಲವು ಹೊಂದಿರುವ ಬಸವರಾಜ ಬಿಸರಳ್ಳಿ ಅವರಿಗೆ ನಾಲ್ವರು ಪುತ್ರರು, ಒಬ್ಬಳು ಪುತ್ರಿ ಇದ್ದಾರೆ. ಇದಲ್ಲದೆ ಇವರು ಐದು ಪುಸ್ತಕಗಳನ್ನು ಕೂಡಾ ಬರೆದಿದ್ದಾರೆ ಎನ್ನುವುದು ವಿಶೇಷ.