ನವದೆಹಲಿ, ಸೆ 6 (MSP): ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಹೊರಹಾಕಿದೆ. ಸಲಿಂಗಕಾಮ ಅಪರಾಧ ಎಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 377ರ ಸಾಂವಿಧಾನಿಕ ಮಾನ್ಯತೆ ಕುರಿತಂತೆ ಸುಪ್ರೀಂಕೋರ್ಟ್ ,ಮಹತ್ವದ ತೀರ್ಪು ಹೊರಹಾಕಿದ್ದು ಇನ್ಮುಂದೆ ಸಲಿಂಗ ಕಾಮ ಅಪರಾಧ ಅಲ್ಲ ಎಂಬ ತೀರ್ಪು ನೀಡಿದೆ.
ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಪಂಚ ಸದಸ್ಯ ಪೀಠ ಈ ತೀರ್ಪು ನೀಡಿದ್ದು ಸುಪ್ರೀಂಕೋರ್ಟ್ ಸಲಿಂಗಿಗಳಿಗೆ ಸಿಹಿ ಸುದ್ದಿ ನೀಡುತ್ತಿದ್ದಂತೆ, ದೇಶದ ಹಲವೆಡೆಗಳಲ್ಲಿ ಸಲಿಂಗಕಾಮಿಗಳು ಹಾಗೂ ಮಾನವ ಹಕ್ಕು ಹೋರಾಟಗಾರರು ಸಿಹಿ ಹಂಚಿ ಸಂಭ್ರಮಾಚರಣೆಯನ್ನು ನಡೆಸುತ್ತಿದ್ದಾರೆ.
ಐಪಿಸಿ ಸೆಕ್ಷನ್ 377ರ ವಿಧಿಗೆ ಯಾವುದೇ ತರ್ಕವಿಲ್ಲ ಎಂದು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಐತಿಹಾಸಿಕ ತೀರ್ಪು ನೀಡಿದ್ದು, ಭಾರತದಲ್ಲಿ ವೈವಿಧ್ಯತೆಯ ಶಕ್ತಿಯನ್ನು ಗೌರವಿಸುವ ಅಗತ್ಯವಿದೆ ಎಂದು ಸಿಜೆಐ ದೀಪಕ್ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಈ ಹಿಂದಿನ ಪೂರ್ವಾಗ್ರಹಗಳಿಗೆ ಕೊನೆ ಹಾಡಬೇಕಾಗಿದ್ದು, ಸಲಿಂಗಕಾಮಿಗಳಿಗೂ ಎಲ್ಲರಂತೆ ಬದುಕುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.