ಪಡುಬಿದ್ರಿ, ಸೆ 6(SM): ಪಡುಬಿದ್ರಿ ಹೆಜಮಾಡಿಯ ಟೋಲ್ ಗೇಟ್ ನಲ್ಲಿ ಸುಂಕ ವಸೂಲಿ ನಡೆಸುತ್ತಿರುವ ನವಯುಗ್ ಕಂಪನಿಯ ವಿರುದ್ದ ಸಾರ್ವಜನಿಕರು ಮತ್ತೆ ಆಕ್ರೋಶಗೊಂಡಿದ್ದಾರೆ. ಉಡುಪಿಯ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಈ ಒಂದು ಆಕ್ರೋಶ ಕೇಳಿ ಬಂದಿದೆ. ಸಾಮಾನ್ಯ ಸಭೆಯಲ್ಲಿ ಟೋಲ್ ಗೇಟ್ ಸುಂಕ ವಸೂಲಿ ವಿಚಾರವಾಗಿ ಗಂಭೀರ ಚರ್ಚೆ ನಡೆಯಿತು. ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರು ಹೆದ್ದಾರಿ ಕಾಮಗಾರಿ ಸುಂಕ ವಸೂಲಿ ಮಾಡಬಾರದೆಂದು ಸಭೆಯಲ್ಲಿ ಒತ್ತಾಯಿಸಿದವು.
ಅಲ್ಲದೆ ಕೆಎ 20 ನೋಂದಣಿ ಸಂಖ್ಯೆ ಇರುವ ವಾಹನಗಳಿಂದಲೂ ನವಯುಗ್ ಕಂಪನಿ ಸುಂಕ ವಸೂಲಿ ಮಾಡುತ್ತಿದೆ. ಇದು ಸರಿಯಲ್ಲ. ಕೆಎ 20 ಬೋರ್ಡಿನ ಯಾವುದೇ ವಾಹನಗಳಿಗೆ ಜಿಲ್ಲೆಯ ಕಡೆಗಳಲ್ಲಿ ಸುಂಕ ಪಾವತಿಸುವುದನ್ನು ನಿರ್ಬಂಧಿಸಬೇಕು ಎಂದು ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರಿಂದ ಆಗ್ರಹಗಳ ಮಹಾಪೂರವೇ ಕೇಳಿ ಬಂತು.
ಇನ್ನು ಸಭೆಯಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ಈವರೆಗೆ ಪಡಿತರ ಚೀಟಿ ಸಿಗದಿರುವ ಬಗ್ಗೆ ಸದಸ್ಯರಿಂದ ಆಕ್ರೋಶ ವ್ಯಕ್ತವಾಯಿತು. ಪಡಿತರ ಚೀಟಿ ಇಲ್ಲದ ಕಾರಣ ಸರಕಾರಿ ಸವಲತ್ತುಗಳನ್ನು ಪಡೆಯುವ ಜನರಿಗೆ ಕಷ್ಟ ಕರವಾಗುತ್ತಿದೆ. ಸರಕಾರ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕು ಎಂಬ ಆಗ್ರಹ ಸದಸ್ಯರಿಂದ ಕೇಳಿ ಬಂತು.