ಮಂಗಳೂರು, ಸೆ 9(SM): ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್ನ ರಿಲೆಯಲ್ಲಿ ಚಿನ್ನ ಮತ್ತು ಬೆಳ್ಳಿ ಗೆದ್ದ ಕನ್ನಡತಿ ಪೂವಮ್ಮ ಅವರನ್ನು ಸೆಪ್ಟೆಂಬರ್ 6ರಂದು ಮಂಗಳೂರಿನಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪೂವಮ್ಮ ಆಕೆಯ ಪೂವಮ್ಮ ತಂದೆ, ತಾಯಿ ಹಾಗೂ ಕುಟುಂಬಸ್ಥರು ಸ್ವಾಗತಿಸಿದರು.
ಈ ಸಂದರ್ಭ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೋಹನ್ ಆಳ್ವ, ಮನಪಾ ಸದಸ್ಯರು, ಕ್ರೀಡಾ ಇಲಾಖೆ ಅಧಿಕಾರಿಗಳು ಪೂವಮ್ಮ ಅವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಹಾಗೂ ಪೂವಮ್ಮ ಅವರಿಗೆ ಹೂವಿನ ಹಾರ ಹಾಕಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಮ್ಮ ಗೆಲುವನ್ನು ಮೊದಲು ಹೆತ್ತವರಿಗೆ ಮತ್ತು ಕೊಡಗು ಪ್ರವಾಹ ಪೀಡಿತರಿಗೆ ಅರ್ಪಿಸುವೆ ಎಂದರು. ಪೂವಮ್ಮ ಅವರ ಗೆಲುವಿನ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ನಾಸಿಕ್ ಬ್ಯಾಂಡ್ ವಾದ್ಯಗಳ ಮೂಲಕ ಅದ್ದೂರಿ ಸ್ವಾಗತವನ್ನು ಮಾಡಲಾಯಿತು.
ಸರಕಾರಿ ನಿವೇಶನ ನೀಡಲು ಶಾಸಕ ವೇದವ್ಯಾಸ್ ಆಗ್ರಹ:
ಇನ್ನು ರಾಜ್ಯ, ರಾಷ್ಟ್ರ, ಮಂಗಳೂರು ನಗರಕ್ಕೆ ಕೀರ್ತಿ ತಂದಿರುವ ಪೂವಮ್ಮ ಅವರಿಗೆ ಮಂಗಳೂರು ನಗರದಲ್ಲಿ ಸರಕಾರಿ ನಿವೇಶನ ಮತ್ತು ಒಂದು ಕೋಟಿ ರೂಪಾಯಿಯನ್ನು ಪ್ರೋತ್ಸಾಹಧನವಾಗಿ ನೀಡಬೇಕು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೂವಮ್ಮ ಅವರನ್ನು ಸ್ವಾಗತಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು ಪೂವಮ್ಮ ಅವರು ನಮ್ಮ ದೇಶ, ರಾಜ್ಯ, ಮಂಗಳೂರಿಗೆ ಕೀರ್ತಿ ತಂದ ಕ್ರೀಡಾಪಟು. ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿ ವಿವಿಧ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗಳಿಸಿದ್ದಾರೆ. ಮಂಗಳೂರು ನಗರದಲ್ಲಿ ಸರಕಾರಿ ನಿವೇಶನ ಕೊಡುವ ಮೂಲಕ ಸರಕಾರ ಅವರನ್ನು ಪ್ರೋತ್ಸಾಹಿಸಬೇಕು. ಪೂವಮ್ಮ ಕುಟುಂಬದವರು ನಾಲ್ಕು ವರ್ಷಗಳ ಹಿಂದೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅದನ್ನು ಇನ್ನು ತಡ ಮಾಡದೇ ಆದಷ್ಟು ಬೇಗ ಪೂವಮ್ಮ ಅವರಿಗೆ ನಿವೇಶನ ಮಂಜೂರು ಮಾಡಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ಒತ್ತಾಯಿಸಿದ್ದಾರೆ.