ವಿಟ್ಲ, ಸೆ 6(SM): ಅತ್ಯುತ್ತಮ ವೈದ್ಯರಾಗಿ ಸಮಾಜ ಸೇವೆ ಸಲ್ಲಿಸಬೇಕೆನ್ನುವುದು ಆಸೆ ಇರೋದು ಸಹಜ. ಆದರೆ ಇದು ಕೈಗೂಡೋದು ಕೆಲವೇ ಕೆಲವರಿಗೆ ಮಾತ್ರ. ಇಂತಹ ಮಹಾನ್ ಸೇವೆಯ ಭಾಗ್ಯವನ್ನು ಪಡೆದ ಕುಟುಂಬವೊಂದು ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದಲ್ಲಿದೆ. ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ 26 ಜನ ವೈದ್ಯರು ಆ ಕುಟುಂಬದಲ್ಲಿದ್ದಾರೆ. ಇವರೆಲ್ಲರೂ ಸಂಕಲ್ಪ ಮಾಡಿ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ನಿಸ್ವಾರ್ಥವಾಗಿ ಗ್ರಾಮೀಣ ಭಾಗದಲ್ಲಿನ ಬಡ ರೋಗಿಗಳಿಗೆ, ಉಚಿತ ವೈದ್ಯಕೀಯ ಸೇವೆ ನೀಡುವ ಸಾರ್ಥಕ ಸೇವೆಗೆ ಮುಂದಾಗಿದ್ದು, ಗ್ರಾಮದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ಕರ್ನಾಟಕ ಕೇರಳ ಗಡಿಯಲ್ಲಿ ಬರುವ ಕಾಡಂಚಿನ ಗ್ರಾಮ ಇದಾಗಿದ್ದು, ಇಲ್ಲಿನ ಪಕಳಕುಂಜದಲ್ಲಿರುವ ವೈದ್ಯರ ಕುಟುಂಬ ‘ನಾಯರ್ಮೂಲೆ ವೈದ್ಯರ ಕುಟುಂಬ’ವೆಂದೇ ಪ್ರಸಿದ್ದಿ ಪಡೆದುಕೊಂದಿದೆ. ಈ ಕುಟುಂಬದಲ್ಲಿ 26 ಮಂದಿ ವೈದ್ಯರಿದ್ದಾರೆ. ಚಿಕ್ಕಂದಿನಲ್ಲಿ ಇದೇ ಗ್ರಾಮದಲ್ಲಿ ಆಡಿ ಬೆಳೆದ ಇವರೆಲ್ಲರೂ ಇಂದು ದೇಶವಿದೇಶಗಳಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ. 26 ವೈದ್ಯರು ಕೂಡಾ ಬೇರೆ ಬೇರೆ ರೋಗದ ಸ್ಪೆಷಲಿಸ್ಟ್ಗಳಾಗಿರುವುದು ಮತ್ತೊಂದು ವಿಶೇಷ.
ತಮ್ಮ ಕುಟುಂಬದಿಂದ ಸಮಾಜಕ್ಕೆ ಏನಾದರೊಂದು ಸೇವೆ ಸಲ್ಲಿಸಬೇಕೆಂದು ಪ್ರತಿಜ್ಞೆ ಮಾಡಿದ ಈ ಕುಟುಂಬ 2 ವರ್ಷಗಳ ಹಿಂದೆ ಗ್ರಾಮೀಣ ಭಾಗವಾದ ತಮ್ಮ ಹುಟ್ಟೂರಿನ ಜನತೆಗೆ ಉಚಿತ ವೈದ್ಯಕೀಯ ಸೇವೆ ನೀಡುವ ಸಂಕಲ್ಪ ಮಾಡಿದ್ದಾರೆ. ಪ್ರಾಯೋಗಿಕವಾಗಿ 2016ರ ಏಪ್ರಿಲ್ ತಿಂಗಳಿನಲ್ಲಿ ಗ್ರಾಮದ ಶಾಲೆಯ ಆವರಣದಲ್ಲಿ ಮೆಡಿಕಲ್ ಕ್ಯಾಂಪೊಂದನ್ನು ನಡೆಸಿದ್ದು, ಬರೋಬ್ಬರಿ 400ಕ್ಕೂ ಮಿಕ್ಕಿ ರೋಗಿಗಳು ಶಿಬಿರದ ಪ್ರಯೋಜನ ಪಡೆದುಕೊಂಡಿದ್ದಾರೆ. ಅಂದಿನಿಂದ ಆರಂಭಗೊಂಡು ಇಂದಿನವರೆಗೆ ಪ್ರತೀ ತಿಂಗಳು ಇಲ್ಲಿ ಉಚಿತ ಸೇವೆ ಮುಂದುವರೆದಿದೆ. ನಾಯರ್ಮೂಲೆ ಫ್ರೀ ಹೆಲ್ತ್ ಸೆಂಟರ್ ಅಂತಾ ಆರಂಭಿಸಿ ಉಚಿತ ಸೇವೆ ನೀಡುತ್ತಿದ್ದಾರೆ.
ಈ ಕುಟುಂಬದ 26 ಮಂದಿ ವೈದ್ಯರ ಪೈಕಿ ಕೆಲವರು ಸರಕಾರಿ ಆಸ್ಪತ್ರೆಗಳಲ್ಲೂ ವೈದ್ಯರಾಗಿದ್ದಾರೆ. ಮತ್ತೆ ಕೆಲವರು ವಿದೇಶದ ಖ್ಯಾತ ಯೂನಿವರ್ಸಿಟಿಗಳಲ್ಲಿ ಫ್ರೋಫೆಸರ್ ಗಳಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಸ್ಪೆಷಲಿಸ್ಟ್ ಆಗಿರೋದ್ರಿಂದ ಒಂದೊಂದು ತಿಂಗಳು ಒಂದೊಂದು ಸ್ಪೆಷಲಿಸ್ಟ್ ಗಳಿಂದ ಆರೋಗ್ಯ ತಪಾಸಣೆ ಕಾರ್ಯವನ್ನು ಮಾಡುತ್ತಾರೆ. ಈ ಬಗ್ಗೆ ಮುಂಚೆಯೇ ಗ್ರಾಮದ ಜನರಿಗೆ ಮಾಹಿತಿಯನ್ನು ನೀಡುತ್ತಾರೆ. ವೈಧ್ಯರು ವಿಧೇಶದಿಂದ ಬಂದು ಚಿಕಿತ್ಸೆ ನೀಡಿ ಹೋಗುತ್ತಾರೆ.
ಇನ್ನು ಈ ವರೆಗೂ ವಿಶೇಷ ಪ್ರಕರಣಗಳಲ್ಲಿ ವರ್ಡ್ ಹೆಲ್ತ್ ಆರ್ಗನೈಜೇಷನ್ ಸಹಾಯ ಪಡೆದು ೩೫ಕ್ಕೂ ಹೆಚ್ಚು ಜನರಿಗೆ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಲಾಗಿದೆ. ಇನ್ನು ಕೆಲ ದಿಗಳಲ್ಲಿ ಕ್ಯಾನ್ಸರ್ ಖಾಯಿಲೆಗಳನ್ನು ಪತ್ತೆ ಹಚ್ಚಿ ಮುನ್ನಚ್ಚರಿಕ ಕ್ರಮ ಹಾಗೂ ತಕ್ಷಣ ಚಿಕಿತ್ಸೆ ಪಡೆಯುವ ಬಗ್ಗೆ ಸಲಹೆಗಳನ್ನು ನೀಡುವ ಕಾರ್ಯ ಕೂಡ ಈ ಗ್ರಾಮೀಣ ಭಾಗದಲ್ಲಿ ವೈದ್ಯ ಕುಟುಂಬ ಆರಂಭಿಸಿದ್ದು, ಗ್ರಾಮೀಣ ಜನತೆಗೆ ಇದರಿಂದ ನೆರವಾಗಿದೆ.
ಒಂದು ಒಳ್ಳೆ ಉದ್ಯೋಗ, ಕೈತುಂಬಾ ಸಂಬಳ, ಆರಾಮದಾಯಕ ಜೀವನ ಎಂಬ ಸೂತ್ರವನ್ನು ಮೈಗೂಡಿಸಿಕೊಂಡಿರುವ ಅದೆಷ್ಟೋ ಮಂದಿಗೆ ಈ ಕುಟುಂಬವೊಂದು ಮಾರ್ಗದರ್ಶಿಯಾಗಿದೆ. ನಾಯರ್ಮೂಲೆ ವೈದ್ಯ ಕುಟುಂಬದ ನಿಸ್ವಾರ್ಥ ಸೇವೆ ಪಡೆಯುತ್ತಿರುವ ಗ್ರಾಮದ ಜನತೆ ವೈದ್ಯರ ಕುಟುಂಬಕ್ಕೆ ಶಿರಬಾಗುತ್ತಾರೆ. ಉದ್ಯೋಗವೊಂದು ಹಣ ಮಾಡುವುದಕ್ಕಷ್ಟೇ ಸೀಮಿತವಾಗಿರದೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿರುವ ಈ ಕುಟುಂಬಕ್ಕೆ ನಮ್ಮದೊಂದು ಸಲಾಮ್.