ಮಂಗಳೂರು, ಅ 4 : ಹಣದುಬ್ಬರ, ಕಪ್ಪು ಹಣ, ಭ್ರಷ್ಟಾಚಾರ, ಸೈನಿಕರ ಹತ್ಯೆ, ಬೆಲೆ ಏರಿಕೆ ಬಗ್ಗೆ ಉತ್ತರಿಸಬೇಕಾಗಿದ್ದ , ಬಿಜೆಪಿಯ ಅಮಿತ್ ಶಾ ಕೇರಳಕ್ಕೆ ಸುಮ್ಮನೆ ಬಂದು ಹೋಗಿದ್ದಾರೆ ಎಂದು ಸಚಿವ ಯು ಟಿ ಖಾದರ್ ಕಿಡಿಕಾರಿದ್ದಾರೆ. ಇಲ್ಲಿ ಪತ್ರೀಕಾಗೋಷ್ಟಿಯನ್ನು ನಡೆಸಿ ಮಾತನಾಡಿದ ಅವರು ಕಳೆದ ಲೋಕಸಭೆಯ ಚುನಾವಣೆಯ ವೇಳೆ ನಾನಾ ಅಮೀಷವೊಡ್ಡಿ ಮತ ಪಡೆದು ಹೋದ ಬಿಜೆಪಿಯವರು ಈಗ ಮತ್ತೆ ರಾಜ್ಯದ ಚುನಾವಣೆ ಸಮೀಪಿಸುತ್ತಿರುವಾಗ ಬಂದು ಜನರನ್ನು ದಿಕ್ಕುತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಮಾನವೀಯತೆ ಮತ್ತು ಸತ್ಯದ ಭೂಮಿಯಾಗಿರುವ ಕರ್ನಾಟಕವನ್ನು ಗುಜರಾತ್ ಮಾಡಲು ಸಾಧ್ಯವಿಲ್ಲ ನೆನಪಿಟ್ಟುಕೊಳ್ಳಿ ಎಂದು ಹೇಳಿದರು.
ಈ ಹಿಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಗೆ ಭದ್ರತೆ ನೀಡಿದಾಗ ಅದನ್ನು ವಿರೋಧಿಸಿ ಅವರ ಸಾವಿಗೆ ಪರೋಕ್ಷ ಕಾರಣವಾಗಿದ್ದ ಬಿಜೆಪಿಯವರ ಸಿದ್ದಾಂತ ಎಲ್ಲಿ ಹೋಯಿತು. ಯಾಕೆಂದರೆ ಇಂದು ಅಮಿತ್ ಶಾ ಹಾಗೂ ಅವರ ಪಕ್ಷದವರು ಬುಲೆಟ್ ಪ್ರೂಪ್ ಕಾರಿನಲ್ಲಿ ಸಂಚರಿಸುತ್ತಿದ್ದಾರೆ ಎಂದು ಟೀಕಿಸಿದರು. ಇದೇ ವೇಳೆ ಶೋಭಾ ಕರಂದ್ಲಾಜೆ "ಸಿ ಎಂ ಕಾಮ್ ಕಿ ಭಾತ್ ಅಲ್ಲ ಲೂಟ್ ಕೆ ಭಾತ್ " ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಖಾದರ್ ಲೂಟ್ ಕೆ ಬಾತ್ ಮಾಡಲು ಸಾಧ್ಯವಿರುವುದು ಬಿಜೆಪಿಗೆ ಮಾತ್ರ ಹಾಗಾಗಿಯೇ ಆ ಪಕ್ಷದವರು ಲೂಟಿ ಮಾಡಿ ಜೈಲ್ ಗೆ ಹೋಗಿದ್ದಾರೆ ಎಂದರು.