ಮಡಿಕೇರಿ/ಮಣ್ಣಂಗೇರಿ, ಸೆ07(SS): ಕೊಡಗು ಪ್ರವಾಹದಿಂದ ಸೂರು ಕಳೆದುಕೊಂಡು ನೊಂದವರು ಒಂದೆಡೆಯಾದರೆ, ಇನ್ನೊಂದೆಡೆ ಈ ನೋವಿನ ಸಮಯದಲ್ಲೂ ಸಂತ್ರಸ್ತೆಯೊಬ್ಬಳು ದಾನಿಗಳ ನೆರವಿನಿಂದ ನವಜೀವನಕ್ಕೆ ನವಜೀವನಕ್ಕೆ ಕಾಲಿಟ್ಟಿದ್ದಾರೆ.
2ನೇ ಮಣ್ಣಂಗೇರಿ ನಿವಾಸಿ ವಾರಿಜಾ (26) ಹಾಗೂ ಪುಣೆಯ ರುದ್ರೇಶ್ (32) ಕಲ್ಲುಗುಂಡಿಯ ಪರಿಹಾರ ಕೇಂದ್ರದಲ್ಲಿ ಹೊಸ ಬಾಳಿಗೆ ಕಾಲಿಟ್ಟ ನವಜೋಡಿ. ಹಿಂದು-ಮುಸ್ಲಿಂ-ಕ್ರೈಸ್ತ ಎನ್ನುವ ಧರ್ಮ ಭೇದವಿಲ್ಲದೆ ಎಲ್ಲರ ನೆರವಿನಿಂದ ಮಡಿಕೇರಿಯ ಗಣಪತಿ ದೇವಸ್ಥಾನದಲ್ಲಿ ಈ ಜೋಡಿ ಹಸೆಮಣೆ ಏರಿದ್ದಾರೆ.
ಕೊಡಗಿನ ಮಳೆಯ ಅವಾಂತರಕ್ಕೆ ಸಿಲುಕಿ ವಾರಿಜಾ (ವಧು) ಕುಟುಂಬ ಮನೆ ಕಳೆದುಕೊಂಡು ಕಲ್ಲುಗುಂಡಿಯ ಪರಿಹಾರ ಕೇಂದ್ರ ಸೇರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಣಾಮ ಆ.18ರಂದು ನಡೆಯಬೇಕಿದ್ದ ಮದುವೆ ನಿಂತು ಹೋಗಿತ್ತು. ಮಾತ್ರವಲ್ಲ, ಪ್ರವಾಹದಲ್ಲಿ ಮನೆ, ಆಸ್ತಿ ಕಳೆದುಕೊಂಡಿದ್ದ ದಿ. ಕೃಷ್ಣಪ್ಪ ನಾಯ್ಕರ ಕುಟುಂಬ ತೀರಾ ಕಷ್ಟದಲ್ಲಿತ್ತು. ತಂದೆ ಅಗಲಿದ ಬಳಿಕ ಮಣ್ಣಂಗೇರಿಯಲ್ಲಿ ವಾರಿಜಾಳನ್ನು ತಾಯಿ ರೋಹಿಣಿ ಸಾಕಿದ್ದರು. ಆದರೆ, ಪ್ರವಾಹದ ಅಟ್ಟಹಾಸಕ್ಕೆ ಇವರ ಬದುಕು ನಾಶವಾಗಿತ್ತು. ಈ ನಡುವೆ ಮದುವೆಯೂ ನಿಂತು ಹೋಗಿತ್ತು.
ಇದೀಗ ನೋವಿನ ನಡುವೆಯೂ ವಾರಿಜಾ ಅವರ ಮದುವೆ ಶಾಸ್ತ್ರ ನಡೆದಿದೆ. ಕಲ್ಲುಗುಂಡಿಯ ಸರ್ಕಾರಿ ಶಾಲೆಯಲ್ಲಿರುವ ಪರಿಹಾರ ಕೇಂದ್ರದಲ್ಲಿ ಕಳೆದೆರಡು ದಿನಗಳ ಹಿಂದೆ ಮದರಂಗಿ ಶಾಸ್ತ್ರ ನೆರವೇರಿಸುವ ಮೂಲಕ ಸಂಘ ಸಂಸ್ಥೆಗಳು, ನಿರಾಶ್ರಿತರು ಜಾತಿ, ಧರ್ಮ ಭೇದವಿಲ್ಲದೆ ಮದುವೆ ಸಂಭ್ರಮದಲ್ಲಿ ತೊಡಗಿದ್ದಾರೆ.
ಸಂಪಾಜೆ, ಜೋಡುಪಾಲದ ಜನರು ಮದುವೆಗೆ ಹಣ ಒಟ್ಟುಗೂಡಿಸಿ ಶುಭ ಕಾರ್ಯಕ್ಕೆ ಹೆಗಲು ನೀಡಿದ್ದಾರೆ. ನವ ಜೋಡಿಗೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಭೇದವಿಲ್ಲದೆ ಸಂತ್ರಸ್ತರು ಶುಭ ಕೋರಿದ್ದಾರೆ.