ಮಂಗಳೂರು, ಸೆ07(SS): ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸಲು ಯತ್ನಿಸಲಾಗಿದ್ದ ಕ್ವಿಂಟಾಲ್ಗಟ್ಟಲೆ ಪಡಿತರ ಅಕ್ಕಿಯನ್ನು ಪಾಂಡೇಶ್ವರ ಕಾಪೋರೇಟರ್ ದಿವಾಕರ್ ನೇತ್ರತ್ವದ ಸಾಮಾಜಿಕ ಕಾರ್ಯಕರ್ತರ ತಂಡ ದಾಳಿ ನಡೆಸಿ ತಡೆ ಹಿಡಿದಿದ್ದಾರೆ.
ಅಕ್ರಮ ಅಕ್ಷರ ದಾಸೋಹ ಪಡಿತರ ಅಕ್ಕಿ ಸಾಗಾಟದ ಆರೋಪ ಕೇಳಿ ಬಂದ ಹಿನ್ನೆಲೆ, ಮಂಗಳೂರಿನ ಬೋಂದೆಲ್ ಸಮೀಪವಿರುವ ಮ್ಯಾಂಗುಲರ್ ರೈಸ್ ಮಿಲ್ ಗೆ ಕಾಪೋರೇಟರ್ ದಿವಾಕರ್ ತೆರಳಿ ದಾಳಿ ನಡೆಸಿದ್ದಾರೆ. ಈ ವೇಳೆ ಗೋಡಾನಿನಲ್ಲಿ 500ಕ್ಕೂ ಅಧಿಕ ಅಕ್ಕಿ ಗೋಣಿ ಚೀಲಗಳಲ್ಲಿ ಸುಮಾರು 5 ಕ್ವಿಂಟಲ್ ಅಕ್ಕಿ ಶೇಖರಿಸಿಡಲಾಗಿತ್ತು.
ಶಕ್ತಿನಗರದ ಸರ್ಕಾರಿ ಗೋಡಾನ್ ನಿಂದ ಪದವಿನಂಗಡಿ ನ್ಯಾಯಬೆಲೆ ಅಂಗಡಿಗೆ ಸಾಗಾಟವಾಗಬೇಕಿದ್ದ ಅಕ್ಕಿ ಇದಾಗಿದ್ದು, ರೈಸ್ಮಿಲ್ಗೆ ತಂದು ಗೋಣಿ ಬದಲಾಯಿಸಿ ಮಾರಾಟ ಮಾಡಲು ಆರೋಪಿಗಳು ಯತ್ನ ನಡೆಸಿದ್ದರು. ಆದರೆ ಈ ವೇಳೆ ಪಾಂಡೇಶ್ವರ ಕಾಪೋರೇಟರ್ ದಿವಾಕರ್ ನೇತ್ರತ್ವದ ತಂಡ ದಾಳಿ ನಡೆಸಿದ್ದು, ಅಕ್ರಮ ಪಡಿತರ ಅಕ್ಕಿ ಸಾಗಾಟ ಮಾಡುವುದನ್ನು ತಡೆದಿದ್ದಾರೆ.
ಸ್ಥಳಕ್ಕೆ ಕಾವೂರು ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮಾತ್ರವಲ್ಲ, ಲಾರಿ ಚಾಲಕ ಸೇರಿದಂತೆ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ, ಘಟನೆ ನಡೆದ ಸ್ಥಳಕ್ಕೆ ಆಹಾರ ನಾಗರಿಕ ಸರಬರಾಜು ಸಹಾಯಕ ಅಧಿಕಾರಿ ಸುನಂದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ದಾಳಿಗೆ ಆರ್.ಟಿ.ಐ ಕಾರ್ಯಕರ್ತ ಹನುಮಂತ್ ಕಾಮತ್ ಸಾಥ್ ನೀಡಿದ್ದಾರೆ.