ಮಂಗಳೂರು, ಸೆ07(SS): ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿಯವರ ಮಹದಾಸೆಯಂತೆ ಪ್ರಸ್ತುತ ವರ್ಷದಿಂದ ನೀಡಲಾಗುತ್ತಿರುವ ವಿದ್ಯಾನಿಧಿ, ಆರೋಗ್ಯ ನಿಧಿ, ಸಾಮಾಜಿಕ ನಿಧಿ ವಿತರಣಾ ಕಾರ್ಯಕ್ರಮ ಸೆ.9ರಂದು ಬೆಳಗ್ಗೆ 10 ಗಂಟೆಗೆ ಶ್ರೀ ಕ್ಷೇತ್ರದ ಗೋಕರ್ಣನಾಥ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ದೇವಳದ ಅಧ್ಯಕ್ಷ ಹೆಚ್.ಎಸ್. ಸಾಯಿರಾಂ ಹೇಳಿದ್ದಾರೆ.
ಕ್ಷೇತ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಯ ರೂವಾರಿ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿಯವರ ಮಹದಾಸೆಯಂತೆ ಕ್ಷೇತ್ರದ ವತಿಯಿಂದ 2017ರಿಂದ ದಸರಾ ಸಂದರ್ಭ ವಿದ್ಯಾನಿಧಿ, ಆರೋಗ್ಯ ನಿಧಿ, ಸಾಮಾಜಿಕ ನಿಧಿ ಸ್ಥಾಪಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಡಾ. ಜಗದೀಶ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಇದರಿಂದ ಸಂಗ್ರಹವಾದ 25ಲಕ್ಷ ರೂ. ಮೊತ್ತದಲ್ಲಿ 15ಲಕ್ಷ ರೂ. ವಿದ್ಯಾನಿಧಿ, 5ಲಕ್ಷ ರೂ. ಆರೋಗ್ಯ ನಿಧಿ, 5 ಲಕ್ಷ ರೂ. ಸಾಮಾಜಿಕ ನಿಧಿಗೆ ಮೀಸಲಿರಿಸಿ ವಿತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಮಾತನಾಡಿ, ಮಾಜಿ ಕೇಂದ್ರ ಸಚಿವ, ಕ್ಷೇತ್ರದ ನವೀಕರಣದ ರೂವಾರಿ ಬಿ.ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಸಭಾಕಾರ್ಯಕ್ರಮ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರದ ಅಧ್ಯಕ್ಷ ಹೆಚ್.ಎಸ್. ಸಾಯಿರಾಂ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನಾನಾ ಕ್ಷೇತ್ರದ ಗಣ್ಯರು, ದಾನಿಗಳು, ದೇವಳದ ಆಡಳಿತ ಮಂಡಳಿ ಸದಸ್ಯರು, ಅಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿರುವರು ಎಂದು ತಿಳಿಸಿದ್ದಾರೆ.
ವಿದ್ಯಾನಿಧಿಯಲ್ಲಿ ಅರ್ಹ 55 ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿತರಣೆ ಮಾಡಲಾಗುವುದು. ವೃತ್ತಿಶಿಕ್ಷಣ ಕೋರ್ಸ್ಗೆ 5ರಿಂದ 10ಸಾವಿರ ರೂ., ಪದವಿ ಶಿಕ್ಷಣಕ್ಕೆ 4ರಿಂದ 5ಸಾವಿರ ರೂ., ಪಿಯುಸಿ ಮೇಲ್ಪಟ್ಟ ಶಿಕ್ಷಣಕ್ಕೆ 2500ರಿಂದ 3ಸಾವಿರ ರೂ. ನೀಡಲಾಗುವುದು. ಇದು ಮಾತ್ರವಲ್ಲದೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಅರ್ಜಿ ಸಲ್ಲಿಸಿರುವ ಹಲವರಿಗೆ ಆರೋಗ್ಯ ನಿಧಿಯಿಂದ, ಮದುವೆ ಹಾಗೂ ಇನ್ನಿತರ ರೀತಿಯಲ್ಲಿ ಸಹಕಾರ ಕೇಳಿದವರಿಗೆ ಸಾಮಾಜಿಕ ನಿಧಿಯಿಂದ ಸಹಕಾರ ಮಾಡಲಾಗಿದೆ ಎಂದರು.
ಬ್ರಹ್ಮ ಶ್ರೀನಾರಾಯಣ ಗುರುಗಳ “ಒಂದೇ ಜಾತಿ ಒಂದೇ ಮತ ಒಂದೇ ದೇವರು” ಎಂಬ ತತ್ತ್ವದಂತೆ ಸಮಾಜದ ಎಲ್ಲ ವರ್ಗದವರಿಗೂ ಸಹಾಯನಿಧಿ ವಿತರಣೆ ಮಾಡಲಾಗುವುದು. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಕಾಸರಗೋಡು ಸೇರಿದಂತೆ ೫ ಜಿಲ್ಲೆಗಳ ವಿದ್ಯಾರ್ಥಿಗಳು ಈ ಸವಲತ್ತು ಪಡೆದುಕೊಳ್ಳಲಿದ್ದಾರೆ ಎಂದರು.