ಕಾಸರಗೋಡು, ಅ 4 : 500 ರೂ. ಮುಖಬೆಲೆಯ ನಾಲ್ಕು ನಕಲಿ ನೋಟುಗಳ ಸಹಿತ ಪೆರ್ಲ ನಿವಾಸಿಯಾಗಿರುವ ಟ್ಯಾಕ್ಸಿ ಚಾಲಕ ನೋರ್ವನನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪೆರ್ಲ ಸೇರಾಜೆ ಯ ಕಮಲಾಕ್ಷ ಪೂಜಾರಿ (44) ಎಂದು ಗುರುತಿಸಲಾಗಿದೆ.ಬುಧವಾರ ಬೆಳಗ್ಗೆ ಉಳಿಯತ್ತಡ್ಕದ ಪೆಟ್ರೋಲ್ ಪಂಪ್ ನಲ್ಲಿ ಎರಡು ಸಾವಿರ ರೂ . ನ ಪೆಟ್ರೋಲ್ ತುಂಬಿಸಿದ್ದು , ಬಳಿಕ 500.ರೂ. ಗಳ 4 ನೋಟುಗಳನ್ನು ನೀಡಿದ್ದಾನೆ. ನೋಟುಗಳನ್ನು ಕಂಡು ಅನುಮಾನಗೊಂಡ ಪಂಪ್ ಮಾಲಕ ಖಾದರ್ ಕೂಡಲೇ ವಿದ್ಯಾನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಗಮಿಸಿ ನೋಟುಗಳನ್ನು ಪರಿಶೀಲಿಸಿ ಕಮಲಾಕ್ಷಗಳನ್ನು ವಶಕ್ಕೆ ತೆಗೆದುಕೊಂಡರು. ನೋಟುಗಳನ್ನು ಪರಿಶೀಲಿಸಿದಾಗ ನಕಲಿ ಎಂದು ಸಾಬೀತುಗೊಂಡಿದೆ.
ಈ ನೋಟುಗಳಲ್ಲಿ ರಿಸರ್ವ್ ಬ್ಯಾಂಕ್ ಗವರ್ನರ್ ರ ಸಹಿಯಲ್ಲಿ ವ್ಯತ್ಯಾಸ ಹಾಗೂ ಆಕಾರದಲ್ಲೂ ಬದಲಾವಣೆಯಾಗಿತ್ತು. ಇದನ್ನು ಗಮನಿಸಿದ ಪಂಪ್ ಮಾಲಕನಿಗೆ ಸಂಶಯ ಉಂಟಾಯಿತು.ವಿದ್ಯಾನಗರ ಪೊಲೀಸರು ಆರೋಪಿಯ ಪೆರ್ಲ ಸೇರಾಜೆಯಲ್ಲಿರುವ ಮನೆಗೆ ದಾಳಿ ನಡೆಸಿ ದ್ದು , ದಾಳಿಯಿಂದ ಬೇರೆ ನಕಲಿ ನೋಟುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ನೋಟುಗಳು ಮಟ್ಕಾ ಕೇಂದ್ರದಿಂದ ಲಭಿಸಿದ್ದಾಗಿ ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ವಿದ್ಯಾನಗರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.