ಮಂಗಳೂರು, ಸೆ08(SS): ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕ್ರೈಸ್ತ ಸಮುದಾಯದವರು ಮೇರಿ ಮಾತೆಯ ಜನ್ಮ ದಿನವನ್ನು ತೆನೆ ಹಬ್ಬವಾಗಿ (ಮೋಂತಿ ಫೆಸ್ಟ್) ಶ್ರದ್ಧೆ, ಭಕ್ತಿ, ಸಂಭ್ರಮ ಹಾಗೂ ಸಡಗರದಿಂದ ಆಚರಿಸಿದರು.
ನಾನಾ ಚರ್ಚ್ ವ್ಯಾಪ್ತಿಯ ಆಸುಪಾಸಿನಲ್ಲಿ ಬೆಳಗ್ಗೆ ಹೊಸ ತೆನೆ ಹಾಗೂ ಮೇರಿ ಮಾತೆಯ ಪ್ರತಿಮೆಯನ್ನು ಮೆರವಣಿಗೆ ಮೂಲಕ ಚರ್ಚ್ ಆವರಣಕ್ಕೆ ತಂದು ಬಳಿಕ ವಿಶೇಷ ಪ್ರಾರ್ಥನೆ ಹಾಗೂ ಪೂಜೆ ಸಲ್ಲಿಸಲಾಯಿತು. ತೆನೆಗಳನ್ನು ಹಿಡಿದುಕೊಂಡ ಮಹಿಳೆಯರು, ನಾನಾ ರೀತಿಯ ಹೂವುಗಳನ್ನು ಹಿಡಿದುಕೊಂಡು ಬಂದ ಪುಟಾಣಿ ಮಕ್ಕಳು, ಬ್ಯಾಂಡ್ ವಾದ್ಯ ಸಹಿತ ಮೆರವಣಿಗೆಯಲ್ಲಿ ಸಾಗಿ ಬಂದರು.
ಧರ್ಮಗುರುಗಳು ಆಶೀರ್ವಚನ ನೆರವೇರಿಸಿದ ಬಳಿಕ ಮೇರಿ ಮಾತೆಗೆ ಪುಷ್ಪಾರ್ಚನೆ ಮಾಡಲಾಯಿತು. ಬಲಿ ಪೂಜೆ ನೆರವೇರಿಸಿದ ಬಳಿಕ ಹೊಸ ಭತ್ತದ ತೆನೆಗಳನ್ನು ಕ್ರೈಸ್ತ ಸಮುದಾಯದವರಿಗೆ ವಿತರಿಸಲಾಯಿತು. ಆಶೀರ್ವದಿಸಿದ ಭತ್ತದ ಕಾಳಿನಿಂದ ಅಕ್ಕಿಯನ್ನು ಕುಟ್ಟಿ ಪುಡಿ ಮಾಡಿ ಹಾಲು ಅಥವಾ ತೆಂಗಿನ ಹಾಲು ಅಥವಾ ಪಾಯಸದಲ್ಲಿ ಹಾಕಿ ಮಿಶ್ರಣ ಮಾಡಿ ಕ್ರೈಸ್ತ ಸಮುದಾಯದವರು ಆಹಾರವಾಗಿ ಸೇವಿಸುತ್ತಾರೆ. ಬಳಿಕ ಮನೆಯಲ್ಲಿ ತರಕಾರಿ ಹಬ್ಬದೂಟ ನಡೆಯುತ್ತದೆ.