ಮಂಗಳೂರು, ಸೆ08(SS): ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉಡುಪಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಲು ನಿನ್ನೆ ಮಂಗಳೂರಿಗೆ ಆಗಮಿಸಿದ್ದರು. ಮಾತ್ರವಲ್ಲ, ಎರಡೂ ಜಿಲ್ಲೆಗಳಲ್ಲಿ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದ್ದರು. ಆದರೆ ಈ ವೇಳೆ ಸಭೆಗೆ ಬಂದಿದ್ದ ಬಿಜೆಪಿಯ ಸಂಸದ ಸೇರಿದಂತೆ ಶಾಸಕರು ಗರಂ ಆಗಿರುವ ಘಟನೆ ವರದಿಯಾಗಿದೆ.
ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿತ್ತು. ಈ ವೇಳೆ ಜೆ.ಡಿ.ಎಸ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರ ಕಾರನ್ನು ಜಿಲ್ಲಾ ಪಂಚಾಯತ್ ಸಭಾಂಗಣದೊಳಗೆ ಬಿಡಲಾಗಿತ್ತು. ಆದರೆ ಬಿಜೆಪಿ ಶಾಸಕರ ಕಾರು ಜಿಲ್ಲಾ ಪಂಚಾಯತ್ ಪ್ರವೇಶಿಸುತ್ತಿದ್ದಂತೆ ಪೊಲೀಸರು ತಡೆದಿದ್ದಾರೆ.
ಪರಿಣಾಮ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಎಲ್ಲಾ ಶಾಸಕರು ಕಾರನ್ನು ಗೇಟ್ ಹೊರಗೆ ಇಟ್ಟು ನಡೆದುಕೊಂಡು ಪಂಚಾಯತ್ ಸಭಾಂಗಣ ತಲುಪಬೇಕಾಯಿತು. ಈ ವೇಳೆ ಶಾಸಕರನ್ನು ಸಭಾಂಗಣದವರೆಗೆ ತೆರಳಲು ಬಿಡದ ಪೊಲೀಸರ ವಿರುದ್ಧ ಬಿಜೆಪಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಕಾರಿನಲ್ಲಿ ಶಾಸಕರು ಎಂದು ಬೋರ್ಡ್ ಇದ್ದರೂ ಪೊಲೀಸರು ಮಾತ್ರ ಸಂಸದರು ಸೇರಿದಂತೆ ಬಿಜೆಪಿಯ ಶಾಸಕರ ಕಾರನ್ನು ಗೇಟ್ ಬಳಿ ನಿಲ್ಲಿಸಿದ್ದಾರೆ ಎಂದು ಆರೋಪಿಸಿದ ಶಾಸಕರು ಸುದ್ದಿಗೋಷ್ಠಿ ಮುಗಿದ ಬಳಿಕ ಸಿಎಂ ಎದುರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಸಿಎಂ ಎಚ್ ಡಿ ಕುಮಾರಸ್ವಾಮಿ ಶಾಸಕರಾದ ರಾಜೇಶ್ ನಾಯ್ಕ್, ಸಂಜೀವ ಮಠಂದೂರು, ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ, ಅಂಗಾರ ಅವರನ್ನು ನಗು ನಗುತ್ತಲೇ ಸಮಾಧಾನಗೊಳಿಸಿ ಮುಂದೆ ಸಾಗಿದರು.