ಪುತ್ತೂರು, ಅ 4: ಕೆಲವು ಮದುವೆಯ ಮಮತೆಯ ಕರೆಯೋಲೆಗಳ ಮೇಲೆ ನಿಮ್ಮ ಆಗಮನವೇ ಉಡುಗೊರೆ, ನಿಮ್ಮ ಆಶೀರ್ವಾದವೇ ಉಡುಗೊರೆ, ಪ್ರೆಸೆಂಟ್ಸ್ ಇನ್ ಬ್ಲೇಸಿಂಗ್ಸ್ ಒನ್ಲಿ ಅಂತೆಲ್ಲ ಪ್ರಿಂಟ್ ಮಾಡಿರುತ್ತಾರೆ. ಆದರೆ ಇಲ್ಲೊಂದು ವಿಭಿನ್ನ ರೀತಿಯ ಮದುವೆ ನಡೆದಿದೆ. ಈ ಮದುವೆಯ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಆಗಮನ, ಶುಭನುಡಿ – ಆಶೀರ್ವಾದಗಳ ಜೊತೆಗೆ ನೀವು ನೀಡಬಯಸುವುದಾದರೆ ಪುಸ್ತಕವನ್ನು ಮಾತ್ರ ಉಡುಗೊರೆಯಾಗಿ ನೀಡಿ ಎಂದು ಬರೆಯಲಾಗಿತ್ತು.
ಅಷ್ಟಕ್ಕೂ ಈ ಮದುವೆ ನಡೆದಿರೋದು ಪುತ್ತೂರಿನಲ್ಲಿ. ಈ ದಂಪತಿಗಳ ಹೆಸರು ಸದಾಶಿವ ಮತ್ತು ಸಂಗೀತ. ಶುಭ ಕಾರ್ಯ ನಡೆದಾಗ ಅತಿಥಿ ಸತ್ಕಾರದಂತೆ, ಉಡುಗೊರೆ ನೀಡುವ ಪದ್ಧತಿ ಕೂಡ ಒಂದು. ಮದುವೆಯಂತಹ ಶುಭ ಕಾರ್ಯಗಳಿಗೆ ಹೆಚ್ಚಾಗಿ ಉಡುಗೊರೆಯನ್ನು ಹಣ, ವಸ್ತುಗಳ ರೂಪದಲ್ಲಿ ನೀಡಿ ವಧು-ವರರನ್ನು ಆಶೀರ್ವದಿಸಲಾಗುತ್ತದೆ. ಆದರೆ ಕೆಲವೇ ದಿನಗಳ ಹಿಂದೆಯಷ್ಟೇ ಪುತ್ತೂರಿನಲ್ಲಿ ಮದುವೆಯಾದ ಈ ಯುವ ಜೋಡಿಯ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ವಿವಾಹಕ್ಕೆ ಆಗಮಿಸುವ ಬಂಧು ಮಿತ್ರರು, ಹಿತೈಷಿಗಳೆಲ್ಲರೂ ನಮ್ಮನ್ನು ಹರಸಿ, ಹಾರೈಸುವುದರ ಜೊತೆಗೆ ನಮಗೆ ಉಡುಗೊರೆ ನೀಡುವುದಾದರೆ ಪುಸ್ತಕವನ್ನು ಕೊಡಿ ಎಂದು ವಿನಂತಿಸಿಕೊಂಡಿದ್ದರು. ಅದರಂತೆ ಮದುವೆಗೆ ಆಮಿಸಿದ ಅತಿಥಿಗಳು ಈ ಜೋಡಿಗಳಿಗೆ ಪುಸ್ತಕವನ್ನು ಉಡುಗೊರೆಯಾಗಿ ನೀಡಿ ಆಶೀರ್ವದಿಸಿದರು.
ಉಡುಗೊರೆಯಾಗಿ ಪುಸ್ತಕಗಳನ್ನು ಪಡೆದುಕೊಂಡಿದ್ದು ಯಾಕೆ..?
ಈ ದಂಪತಿಗಳು ಪುಸ್ತಕಗಳನ್ನು ಉಡುಗೊರೆಯಾಗಿ ಪಡೆದುಕೊಳ್ಳಲು ಕಾರಣ ಇದೆ. ಸದಾಶಿವ ಅವರು ಬೆಂಗಳೂರಿನ ಹಳ್ಳಿಯೊಂದರ ಮೊರಾರ್ಜಿ ದೇಸಾಯಿ ವಸತಿ ಶಾಲೆಯೊಂದರ ಶಿಕ್ಷಕ. ಈ ಶಾಲೆಯಲ್ಲಿ ಬಡ ಮ್ಕಕಳಿಗೆ ಓದಲು ಲೈಬ್ರೆರಿ ಇಲ್ಲ. ಹಾಗಾಗಿ ಈ ದಂಪತಿಗಳು ಮದುವೆಯಲ್ಲಿ ಉಡುಗೊರೆಯಾಗಿ ಪುಸ್ತಕಗಳನ್ನು ಪಡೆದು ಆದರ್ಶ ಮೆರೆದಿದ್ದಾರೆ. ಉಡುಗೊರೆಯಾಗಿ ಪಡೆದ ಪುಸ್ತಕಗಳನ್ನು ತಾನು ಶಿಕ್ಷಕನಾಗಿರುವ ಶಾಲೆಯಲ್ಲಿ ಲೈಬ್ರೆರಿ ನಿರ್ಮಿಸಿ ಮಕ್ಕಳಿಗೆ ನೀಡುವ ಕನಸು ಈ ಶಿಕ್ಷಕನದು. ಉಡುಗೊರೆ ರೂಪದಲ್ಲಿ ಬಡ ಮಕ್ಕಳಿಗೆ ಪುಸ್ತಕಗಳನ್ನು ಪಡೆದು, ಸಮಾಜ ಸೇವೆ ಮಾಡಬೇಕೆಂದು ಯೋಚಿಸಿರುವ ಈ ದಂಪತಿಗಳ ಕೆಲಸಕ್ಕೆ ಶ್ಲಾಘಿಸಲೇಬೇಕು. ಈ ದಂಪತಿಗಳನ್ನು ಆದರ್ಶವಾಗಿಟ್ಟುಕೊಂಡು ಉಳಿದವರೂ ಹೀಗೆ ಬದಲಾದರೆ ಎಷ್ಟು ಚೆನ್ನಾಗಿರುತ್ತದೆಯಲ್ಲವೆ….