ಮಂಗಳೂರು, ಸೆ08(SS): ಕರಾವಳಿಯಾದ್ಯಂತ ಕೆಥೋಲಿಕರಿಗೆ ಪವಿತ್ರ ಮೋಂತಿ ಹಬ್ಬದ ಸಂಭ್ರಮ. ಮಾತೆ ಮರಿಯಮ್ಮನವರ ಜನನ ದಿನದ ಹಿನ್ನೆಲೆಯಲ್ಲಿ ಕರಾವಳಿಯ ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿದರು. ಮೇರಿ ಮಾತೆಯ ಜನ್ಮ ದಿನವನ್ನು ತೆನೆ ಹಬ್ಬವಾಗಿ (ಮೋಂತಿ ಫೆಸ್ಟ್) ಶ್ರದ್ಧೆ, ಭಕ್ತಿ, ಸಂಭ್ರಮ ಹಾಗೂ ಸಡಗರದಿಂದ ಆಚರಿಸಿದರು. ಚರ್ಚುಗಳಿಗೆ ತೆರಳಿದ ಕೆಥೋಲಿಕರು ಮಾತೆ ಮರಿಯಮ್ಮನವರಿಗೆ ಪುಷ್ಪಾರ್ಚನೆ ಮಾಡಿದರು.
ಮಂಗಳೂರಿನ ಬೊಂದೇಲ್ ಸಂತ ಲಾರೆನ್ಸರ ಪವಿತ್ರ ಕ್ಷೇತ್ರದಲ್ಲೂ ಕೂಡ ಹಬ್ಬವನ್ನು ಸಡಗರದಿಂದ ಆಚರಿಸಲಾಗಿದೆ. ಭಕ್ತಾ ಜನರು ಹಾಗೂ ಪುಟ್ಟ ಪುಟ್ಟ ಮಕ್ಕಳು ಮಾತೆಗೆ ಹೂಗಳನ್ನು ಅರ್ಪಿಸಿದ್ದಾರೆ. ಬಳಿಕ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ನಡೆದಿದೆ. ಭಕ್ತಾದಿಗಳು ಈ ಸಂದರ್ಭ ತಮ್ಮ ಕೃಷಿಯ ಪ್ರಥಮ ಫಲವನ್ನು ಮಾತೆಯ ಮೂಲಕ ದೇವರಿಗೆ ಸಮರ್ಪಿಸಿದ್ದಾರೆ.
ಸಂತ ಲಾರೆನ್ಸರ ಪವಿತ್ರ ಕ್ಷೇತ್ರದಲ್ಲಿ ಧರ್ಮಗುರುಗಳಾದ ಲಿಯೋ ಡಿ ಸೋಜಾ ಉಪಸ್ಥಿತಿಯಲ್ಲಿ ಪ್ರಾರ್ಥನೆ ನಡೆದಿದ್ದು, ಬಳಿಕ ಅವರು ಪವಿತ್ರ ತೆನೆಯನ್ನು ಭಕ್ತ ಜನರಿಗೆ ವಿತರಿಸಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡಂತೆ ವಿವಿಧ ಕ್ರೈಸ್ತ ಪ್ರಾರ್ಥನಾ ಮಂದಿರಗಳಲ್ಲಿ ಇಂದು ತೆನೆಹಬ್ಬವನ್ನು ಆಚರಿಸಲಾಗುತ್ತಿದೆ.