ಮಂಗಳೂರು, ಸೆ08(SS): ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ, ಜನ ಸಾಮಾನ್ಯರ ನೋವಿಗೆ ಸ್ಪಂದಿಸಿರುವ ವಿಪಕ್ಷ ಕಾಂಗ್ರೆಸ್ ಕೇಂದ್ರ ಸರಕಾರದ ವಿರುದ್ಧ ದೇಶಾದ್ಯಂತ ಸೆ.10ರಂದು ಬಂದ್ ಮೂಲಕ ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದು ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ರಮಾನಾಥ ರೈ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಂಡವಾಳ ಶಾಹಿಗಳ ಪರವಾಗಿರುವ ಕೇಂದ್ರ ಸರಕಾರಕ್ಕೆ ಜನ ಸಾಮಾನ್ಯರ ನೋವು ಅರ್ಥವಾಗುವುದಿಲ್ಲ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಜನಮಾನ್ಯರ ಮೇಲೆ ಹೇರುತ್ತಿರುವ ಹೊರೆಯಾಗಿದೆ. ಇದರಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಹಾಗಾಗಿ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸಂಘಸಂಸ್ಥೆಗಳು, ಜನ ಸಾಮಾನ್ಯರು ಬೆಳಗ್ಗೆ 10ರಿಂದ ಸಂಜೆಯವರೆಗೆ ನಡೆಯುವ ಈ ಬಂದ್ನಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು.
ಅಚ್ಚೇ ದಿನ್ ಭಾರತಕ್ಕೆ ಬರುತ್ತದೆ ಎಂದು ಹೇಳಿ ಮೋದಿ ಸರಕಾರ ಜನರಿಗೆ ಸುಳ್ಳು ಹೇಳುತ್ತಿದೆ. ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದೆ. ಮಾತ್ರವಲ್ಲ, ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿಕೆ ನೀಡಿತ್ತು. ಆದರೆ ಯಾವುದೂ ನಿಜವಾಗಿಲ್ಲ. ಅವೆಲ್ಲವೂ ಪೊಳ್ಳು ಭರವಸೆಗಳು ಎಂದು ಟೀಕೆ ಮಾಡಿದರು.