ಮಂಗಳೂರು, ಸೆ 9 (MSP) : ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕರೆ ನೀಡಿರುವ ಸೋಮವಾರದಂದು ಭಾರತ್ ಬಂದ್ ಗೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿದ್ದು, ಇದರ ಬಿಸಿ ರಾಜ್ಯಕ್ಕೂ ತಟ್ಟುವ ಸಾಧ್ಯತೆ ಗೋಚರವಾಗಿದೆ. ಬಂದ್ ಗೆ ಪ್ರಮುಖವಾಗಿ ಕೆ.ಎಸ್.ಆರ್.ಟಿ.ಸಿ ಯ ಸ್ಟಾಫ್ ಆಂಡ್ ವರ್ಕರ್ಸ್ ಫೆಢರೇಷನ್ ಬೆಂಬಲ ಸೂಚಿಸಿದೆ.
ಕಾಂಗ್ರೆಸ್ ಕರೆ ನೀಡಿರುವ ಬಂದ್ ಗೆ ಕರಾವಳಿಯಲ್ಲೂ ಜೆಡಿಎಸ್ ಸಹಿತ ಹಲವು ಸಂಘಟನೆಗಳು ಬೆಂಬಲ ಸೂಚಿಸಿರುವುದರಿಂದ ಇಲ್ಲೂ ಕೂಡಾ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಬಂದ್ ಗೆ ಕೆನರಾ ಬಸ್ ಮಾಲಕರ ಸಂಘ ಬಂದ್ ಗೆ ಕೈಜೋಡಿಸಿದೆ. ಇದರೊಂದಿಗೆ ಕರಾವಳಿಯ ಕೈ ನಾಯಕರಾದ ಮಾಜಿ ಸಚಿವ ಬಿ.ರಾಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಬಂದ್ ಯಶಸ್ವಿಗೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.
ಇನ್ನು ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡುವುದು ಆಯಾ ಜಿಲ್ಲಾಧಿಕಾರಿಗಳ ತೀರ್ಮಾನಕ್ಕೆ ಬಿಡಲಾಗಿದೆ. ಸ್ಥಳೀಯ ಪರಿಸ್ಥಿತಿಗಳನ್ನು ಗಮನಿಸಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಶಿಕ್ಷಣ ಇಲಾಖೆ ಆಯುಕ್ತರಿಂದ ಸಂದೇಶ ರವಾನೆಯಾಗಿದೆ. ಪೋಷಕರು, ಶಿಕ್ಷಕರಿಗೆ ಗೊಂದಲವಾಗಬಾರದೆಂಬ ಕಾರಣಕ್ಕೆ 24 ಗಂಟೆ ಮೊದಲೇ ನಿಲುವು ಸ್ಪಷ್ಟಪಡಿಸುವಂತೆ ಸೂಚಿಸಲಾಗಿದೆ.