ಬೆಳ್ತಂಗಡಿ, ಸೆ 9 (MSP) : ಜಾತಿ ಪ್ರಮಾಣ ಪತ್ರದಲ್ಲಿ ಯಾವುದೇ ಜಾತಿ ಬದಲು ಇನ್ಯಾವುದೋ ಜಾತಿ ನಮೂದಿಸಿ ನೀಡಿದ್ದರಿಂದ ಕುಟುಂಬವೊಂದು ಸೌಲಭ್ಯ ವಂಚಿತರಾಗಿ ಸಮಸ್ಯೆಗೆ ಸಿಲುಕಿಕೊಂಡಿರುವ ಘಟನೆ ನಡೆದಿದೆ.ಶೈಕ್ಷಣಿಕ ಸಂಸ್ಥೆಯಲ್ಲಿ ಫೀಸು ವಿನಾಯಿತಿ, ಹಾಗೂ ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ಆದಾಯ, ಜಾತಿ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಆದರೆ ಬೆಳ್ತಂಗಡಿ ತಾಲೂಕಿನಲ್ಲಿ ಮುಸ್ಲಿಂ ಕುಟುಂಬಕ್ಕೆ ತಾಲೂಕು ಕಚೇರಿಯಲ್ಲಿ ನೀಡಿದ ಜಾತಿ ಪ್ರಮಾಣ ಪತ್ರದಲ್ಲಿ ಕುಲಾಲ ಜಾತಿಗೆ ಸೇರಿದವರೆಂದು ದೃಢೀಕರಣ ನೀಡಲಾಗಿದ್ದು ಇದರಿಂದ ಈ ಕುಟುಂಬ ಪೇಚಿಗೆ ಸಿಲುಕಿದೆ.
ಬೆಳ್ತಂಗಡಿಯ ಲಾಯಿಲಾ ಗ್ರಾಮದ ಟಿ.ಬಿ. ಕ್ರಾಸ್ ಬಳಿಯ ನಿವಾಸಿಯಾದ ಮುಸ್ಲಿಂ ಕುಟುಂಬವೊಂದು 2017ರಲ್ಲಿ ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಆಗ ಪ್ರಭಾರ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಹಶೀಲ್ದಾರ್ ಮೊಹಮ್ಮದ್ ಇಸಾಕ್ ಅವರು, ಮುಸ್ಲಿಂ ಬದಲು ಕುಲಾಲ ಎಂದು ಪ್ರಮಾಣ ಪತ್ರ ನೀಡಿದ್ದರು. ಇದರಿಂದ ಗಾಬರಿಗೊಂಡ ಕುಟುಂಬ, ತಿದ್ದುಪಡಿಗಾಗಿ ಅಲೆದಾಟ ನಡೆಸಿದರೂ ಬಿಡಿಕಾಸಿನ ಪ್ರಯೋಜನವಾಗಿಲ್ಲ. ಈ ಕುಟುಂಬದ ಸಮಸ್ಯೆಯನ್ನು ಸೆ 7 ರ ಶುಕ್ರವಾರದಂದು ನಡೆದ, ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ತಾ.ಪಂ. ಸದಸ್ಯ ಸುಧಾಕರ್ ಅವರು ಪ್ರಸ್ತಾವಿಸಿ, ಅಧಿಕಾರಿಗಳ ನಿರ್ಲಕ್ಷ್ಯವನ್ನು ಸಭೆಯ ಗಮನಕ್ಕೆ ತಂದರು. ಅಧಿಕಾರಿಗಳು ಮಾಡಿದ ಎಡವಟ್ಟಿನಿಂದಾಗಿ ಪ್ರಸ್ತುತ ಸಾಕಷ್ಟು ಸಮಸ್ಯೆಗಳನ್ನು ಕುಟುಂಬ ಅನುಭವಿಸಿದೆ ತಕ್ಷಣ ಗಮನಹರಿಸುವಂತೆ ಒತ್ತಾಯಿಸಿದರು.