ಮಂಗಳೂರು, ಸೆ 9 (MSP): ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕರೆ ನೀಡಿರುವ ಸೆ.10 ರ ಬಂದ್ ಗೆ ಯಶಸ್ವಿಯಾಗಲು ಕಾಂಗ್ರೆಸ್ ನಾಯಕರು ಬಿರುಸಿನ ಓಡಾಟ, ಕರಪತ್ರ ಹಂಚುವುದರಲ್ಲಿ ಬ್ಯುಸಿಯಾಗಿದ್ದಾರೆ. ಮಂಗಳೂರಿನಲ್ಲಿ ಮಾತ್ರ ಹಲವೆಡೆ ಭಾರತ್ ಬಂದ್ಗೆ ವಿರೋಧ ವ್ಯಕ್ತವಾಗಿದೆ. ನಗರದ ಬಂದರಿನಲ್ಲಿ ವ್ಯಾಪಾರಸ್ಥರು ತಮ್ಮ ಅಂಗಡಿಯನ್ನು ಎಂದಿಗಿಂತ ಒಂದು ಗಂಟೆ ಹೆಚ್ಚು ಕಾಲ ತೆರೆದಿಡುವ ಬಗ್ಗೆ ಸೂಚನಾ ಫಲಕಗಳನ್ನ ಅಂಟಿಸಿ ಬಂದ್ ಗೆ ತಿರುಗೇಟು ನೀಡಿದ್ದಾರೆ.
ಕರಾವಳಿಯಲ್ಲಿ ಬಂದ್ ಹಿನ್ನಲೆಯಲ್ಲಿ ಸೋಮವಾರ ಸೈಕಲ್ ಜಾಥಾ , ವಾಹನ ತಳ್ಳಿ, ಎತ್ತಿನ ಗಾಡಿ ಓಡಿಸಿ ತೈಲ ಏರಿಕೆ ವಿರುದ್ದ ಕಾಂಗ್ರೇಸ್ ಕಾರ್ಯಕರ್ತರು ಪ್ರತಿಭಟನೆಗೆ ತಯಾರಿ ಮಾಡಿಕೊಂಡರೆ, ಇತ್ತ ಕಡೆ ನಾವು ಅಂಗಡಿ ಬಂದ್ ಮಾಡದೇ ಒಂದು ಗಂಟೆ ಹೆಚ್ಚೇ ಕೆಲಸ ಮಾಡ್ತೀವಿ ಎಂದು ಸೂಚನಾ ಫಲಕ ಅಂಗಡಿಗಳ ಮುಂದೆ ಬಂದ್ ವಿರೋದಿಗಳು ಅಳವಡಿಸಿಕೊಂಡಿದ್ದಾರೆ. ಈ ನಡುವೆ ಹೋಲ್ ಸೇಲ್ ಮರ್ಚಂಟ್ಸ್ ಅಸೋಸಿಯೇಶನ್ ಬಂದ್ಗೆ ವಿರೋಧ ವ್ಯಕ್ತಪಡಿಸಿದ್ದು, ಗೌರಿ ಗಣೇಶ ಹಬ್ಬದ ಪ್ರಯುಕ್ತ ಹೆಚ್ಚು ವ್ಯಾಪಾರ ವಹಿವಾಟು ಇರುತ್ತದೆ . ಹಾಗಾಗಿ ಬಂದ್ ಸಹಕರಿಸಲು ಸಾಧ್ಯವಿಲ್ಲ. ಬಲವಂತವಾಗಿ ಬಂದ್ ಮಾಡಿದರೆ ನಮಗೆ ಪೊಲೀಸರೇ ರಕ್ಷಣೆ ಒದಗಿಸಬೇಕು ಎಂದು ಕೋರಿದ್ದಾರೆ. ಹೋಲ್ ಸೇಲ್ ಅಂಗಡಿಗಳಲ್ಲಿ ಸೆ.10 ರಂದು ತಮ್ಮ ಶಾಪ್ ಹೆಚ್ಚುವರಿ ಒಂದು ಗಂಟೆ ತೆರೆದಿರುತ್ತೆ ಎನ್ನುವ ಫಲಕ ಅಂಟಿಸಿದ್ದಾರೆ.
ಈ ನಡುವೆ, ಸೋಮವಾರದ ಬಂದ್ಗೆ ಕಾಂಗ್ರೆಸ್ ಪ್ರೇರಿತ ಮತ್ತು ಎಡಪಂಥೀಯ ಸಂಘಟನೆಗಳು ಬೆಂಬಲ ಘೋಷಿಸಿದೆ. ಕರಾವಳಿಯ ಖಾಸಗಿ ಬಸ್ ಮಾಲೀಕರು ಕೂಡಾ ಬಂದ್ ಗೆ ಬೆಂಬಲಿಸಿದ್ದರಿಂದ ಸಂಚಾರಕ್ಕೆ ತೊಡಕಾಗುವ ಸಾಧ್ಯತೆ ಇದೆ. ಹೀಗಾಗಿ ನಾಳೆಯ ಬಂದ್ ಕರಾವಳಿಯಲ್ಲಿ ಜಟಾಪಟಿಗೆ ಕಾರಣವಾಗುವ ಸಾಧ್ಯತೆಯಿದೆ.