ಮಂಗಳೂರು, ಸೆ 9(SM): ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ವಿರೋಧಿಸಿ ಸೆಪ್ಟೆಂಬರ್ 10ರ ಸೋಮವಾರದಂದು ಕಾಂಗ್ರೆಸ್ ನೀಡಿದ್ದ ಭಾರತ ಬಂದ್ ಗೆ ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂದ್ ದೇಶದ ಸಂವಿಧಾನಕ್ಕೆ ವಿರುದ್ಧವಾದುದು ಎಂದಿದ್ದಾರೆ.
ಬಂದ್ ನಿಂದ ಆಗುವ ನಷ್ಟಕ್ಕೆ ಯಾರು ಹೊಣೆ..? ಸಾರ್ವಜನಿಕ ಜೀವನಕ್ಕೆ ಹಾನಿ ಮಾಡುವ ಅಧಿಕಾರ ಯಾರಿಗೂ ಇಲ್ಲ. ಕೇಂದ್ರ, ರಾಜ್ಯ ಸರ್ಕಾರ ಸೆಸ್ ಕಡಿಮೆ ಮಾಡಿದರೆ ತೈಲ ಬೆಲೆ ಇಳಿಕೆ ಎಂಬುದು ಭ್ರಮೆ ಎಂದು ಕಿಡಿಕಾರಿದ್ದಾರೆ. ಇನ್ನು ನಾನು ಸೆಸ್ ಇಳಿಸಲು ಹಲವು ಭಾರೀ ಪ್ರಯತ್ನ ಮಾಡಿದ್ದೇನೆ. ಬಳಿಕ ಅದು ಅಸಾಧ್ಯ ಎಂದು ನನ್ನ ಅನುಭವಕ್ಕೆ ಬಂತು. ಸೆಸ್ ಇಳಿಸುವ ಧೈರ್ಯ ಮೋದಿ ಮಾಡಬೇಕು ಎಂದು ಜನಾರ್ಧನ ಪೂಜಾರಿ ಹೇಳಿದ್ದಾರೆ..
ಇನ್ನು ಬಂದ್ ಗೆ ಯಾರು ಕರೆ ಕೊಡುತ್ತಾರೆ ಅವರೇ ನಷ್ಟ ಭರಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗಾಗಿ ಬಂದ್ ಗೆ ಕರೆ ಕೊಡುವವರು ಬಹಳ ಎಚ್ಚರಿಕೆಯಿಂದ ಇರಬೇಕು. ನಾಳೆ ಕೇಸ್ ನೀಡಿದ್ದಲ್ಲಿ ಅದರಿಂದ ಪಾರಾಗಲು ಯಾರಿಂದಲೂ ಸಾಧ್ಯವಿಲ್ಲ. ಬಂದ್ ನಂತರ ದೇಶದಲ್ಲಿ ಆಗುವ ಸಾವಿರಾರು ಕೋಟಿ ನಷ್ಟಕ್ಕೆ ಪಾರ್ಟಿ ಮತ್ತು ಬಂದ್ ಗೆ ಕರೆ ಕೊಟ್ಟವರೇ ಹೊಣೆಗಾರರಾಗುತ್ತಾರೆ. ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಅಥವಾ ಪೂಜಾರಿಯೇ ಇರಲಿ, ಬಂದ್ ಗೆ ಕರೆ ಕೊಡೋದು ತಪ್ಪು, ಅದನ್ನು ಕಾಂಗ್ರೆಸ್ ಅನುಭವಿಸಲಿ ಎಂದಿದ್ದಾರೆ.