ಮಂಗಳೂರು, ಸೆ 9(SM): ತೈಲ ಬೆಲೆ ಏರಿಕೆಯನ್ನು ಖಂಡಿಸಿ ಅಖಿಲ ಭಾರತ ಕಾಂಗ್ರೆಸ್ ಪಕ್ಷವು ನೀಡಿರುವ ಬಂದ್ ಇಂದು ಬಹುತೇಕ ಯಶಸ್ವಿಯಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಮಂಗಳೂರಿನಲ್ಲಿ ಖಾಸಗಿ ಬಸ್ ಸಂಚಾರ ಕಂಡು ಬಂದಿಲ್ಲ. ಅಲ್ಲೊಂದು ಇಲ್ಲೊಂದು ಕಡೆ ಆಟೋರಿಕ್ಷಾ ಓಡಾಡಿಕೊಂಡಿರುವುದು ಕಂಡು ಬಂದಿದೆ. ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದು, ತುರ್ತು ಕೆಲಸಗಳಿಗೆ ತೆರಳುವ ಮಂದಿ ವಾಹನ ಸಂಚಾರವಿಲ್ಲದೆ ಕಂಗೆಟ್ಟರು.
ಬಂದ್ ಹಿನ್ನೆಲೆಯಲ್ಲಿ ನಗರದ ಎರಡು ಕಡೆಗಳಲ್ಲಿ ಕಿಡಿಗೇಡಿಗಳು ಬಸ್ಗಳಿಗೆ ಕಲ್ಲು ತೂರಾಟ ನಡೆಸಿದರೆ, ಜ್ಯೋತಿ ವೃತ್ತದ ಬಳಿ ಕಿಡಿಗೇಡಿಗಳು ಟಯರ್ಗಳಿಗೆ ಬೆಂಕಿ ಹಚ್ಚಿದ್ದರು. ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿ, ಕಿಡಿಗೇಡಿಗಳನ್ನು ಓಡಿಸಿದ್ದಾರೆ. ಸದಾ ಜನಜಂಗುಳಿಯಿಂದ ಗಿಜುಗುಟ್ಟುತ್ತಿದ್ದ ರಾಷ್ಟ್ರೀಯ ಹೆದ್ದಾರಿ ೬೬ ಬಂದ್ನಿಂದಾಗಿ ಬಿಕೋ ಎನ್ನುತ್ತಿತ್ತು. ಕೇರಳದಿಂದ ಮಂಗಳೂರಿಗೆ ಶಿಕ್ಷಣ ಕೇಂದ್ರಗಳಿಗೆ, ವೈದ್ಯಕೀಯ ಸೇವೆಗಾಗಿ, ಹಾಗೂ ದೇರಳಕಟ್ಟೆ ಆಸ್ಪತ್ರೆಗಳಿಗೆ ತೆರಳಲು ಬರುತ್ತಿರುವ ಮಂದಿ ತಲಪಾಡಿಯಲ್ಲಿ ಬಸ್ ಇಲ್ಲದೇ ಕಂಗೆಟ್ಟರು. ಬಹುತೇಕ ಮಂದಿ ತಲಪಾಡಿಯಲ್ಲಿ ಬಸ್ಗಾಗಿ ಕಾಯುತ್ತಿದ್ದ ದೃಶ್ಯ ಕಂಡು ಬರುತ್ತಿತ್ತು. ಆಗೊಮ್ಮೆ, ಈಗೊಮ್ಮೆ ಬರುತ್ತಿದ್ದ ಟೂರಿಸ್ಟ್ ಕಾರುಗಳು ಪ್ರಯಾಣಿಕರನ್ನು ಕರೆದುಕೊಂಡು ಬರುತ್ತಿದ್ದ ದೃಶ್ಯ ಕಂಡು ಬಂತು. ಸರಕಾರಿ ಹಾಗೂ ಖಾಸಗಿ ಬಸ್ಸುಗಳ ಧಾವಂತದಿಂದ ಕೂಡಿರುತ್ತಿದ್ದ ತಲಪಾಡಿ, ಉಳ್ಳಾಲ, ತೊಕ್ಕೊಟ್ಟಿನಲ್ಲಿ ವಾಹನಗಳು ಇಲ್ಲದೇ ಬಿಕೋ ಅನ್ನುತ್ತಿದ್ದ ದೃಶ್ಯಗಳು ಕಂಡು ಬಂದವು.
ಬಂದ್ ಹಿನ್ನೆಲೆಯಲ್ಲಿ ಸಂಪೂರ್ಣ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ ಆರ್ ಸುರೇಶ್ ಹೇಳಿದ್ದು, ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.