ಬಂಟ್ವಾಳ ಅ 4: ಆರ್.ಎಸ್.ಎಸ್. ಕಾರ್ಯಕರ್ತ ಶರತ್ ಮಡಿವಾಳ ಅವರ ಹತ್ಯೆಯಲ್ಲಿರುವ ಪ್ರಮುಖ ಆರೋಪಿಗಳ ಶೀಘ್ರ ಬಂಧನ ಮಾಡಬೇಕು, ಮತ್ತು ಕೊಲೆ ಹಿಂದಿರುವ ಜಾಲಕ್ಕೆ ಎಲ್ಲಿ ಟ್ರೈನಿಂಗ್ ಆಗಿದೆ ಎನ್ನುವುದನ್ನು ಶೀಘ್ರವಾಗಿ ಪೊಲೀಸ್ ಇಲಾಖೆ ಬಯಲಿಗೆ ತರಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದರು. ಅವರು ಶರತ್ ಮಡಿವಾಳ ಅವರ ಅಂಗಡಿಗೆ ಬೇಟಿ ನೀಡಿ ಸಹೋದರಿಯ ಜೊತೆ ಮಾತನಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಇತ್ತೀಚೆಗೆ ನಡೆದ ಹಿಂದೂ ಕಾರ್ಯಕರ್ತರ ಹಲವಾರು ಕೊಲೆಗಳಿಗೂ ಶರತ್ ಮಡಿವಾಳ ಅವರ ಕೊಲೆಗೂ ಸಾಮ್ಯತೆ ಇದೆ , ಕೊಲೆ ಮಾಡಿದ ರೀತಿ ಕೂಡಾ ಒಂದೇ ರೀತಿ ಇದೆ. ಹಾಗಾಗಿ ಕೊಲೆಗಡುಕರಿಗೆ ದೊಡ್ಡ ಮಟ್ಟದಲ್ಲಿ ತರಬೇತಿ ನೀಡಲಾಗುತ್ತಿದೆ ಎನ್ನುವುದು ಸ್ಷಷ್ಟವಾಗುತ್ತದೆ. ಎಲ್ಲಿ ತರಬೇತಿ ನಡೆಯುತ್ತಿದೆ, ಯಾರು ತರಬೇತಿ ನೀಡುತ್ತಾರೆ, ಇವರ ಹಿಂದೆ ಇರುವ ಮುಖ್ಯಸ್ಥರು ಯಾರು ಇದ್ದಾರೆ, ಕಾನೂನು ಮಾಹಿತಿ ನೀಡುವವರು ಯಾರು, ಆರ್ಥಿಕ ಸಹಾಯ ಮಾಡುವವರು ಯಾರು ಇದೆಲ್ಲವನ್ನು ಬೇಧಿಸಿ ಅವರಿಗೂ ಶಿಕ್ಷೆ ಆಗಬೇಕು. ಮುಂದೆ ರಾಜ್ಯದಲ್ಲಿ ಇಂತಹ ಘಟನೆ ಮರುಕಳಿಸಿದ ರೀತಿಯಲ್ಲಿ ಪೊಲೀಸರು ಕೆಲಸ ಮಾಡಬೇಕು ಕೇವಲ ಆರೋಪಿಗಳನ್ನು ಬಂಧಿಸಿ ಕೇಸು ಮುಚ್ಚಿ ಹಾಕುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬಾರದು ಎಂದು ಅವರು ಹೇಳಿದರು. ಶರತ್ ಮಡಿವಾಳ ಅವರ ಸಾವಿಗೆ ನ್ಯಾಯ ಸಿಗಬೇಕಾದರೆ ಎಲ್ಲಾ ಆರೋಪಿಗಳನ್ನು ಬಂದಿಸಿ ಅವರಿಗೆ ಶಿಕ್ಷೆ ಆಗಬೇಕಿದೆ ಎಂದರು.